ಕಥೆಯೊಂದು ಇತಿಹಾಸ

Indian-soldier-780x468

ಜಾಣ ಜಾಣೆಯರ ಜಗಲಿ ಫೇಸ್ ಬುಕ್ ಬಳಗದಲ್ಲಿ ಆಯೋಜಿಸಿದ ಗೀತ್ ಕಹಾನಿ ಕಥಾಸ್ಪರ್ಧೆಯಲ್ಲಿ ಯಾವ ಮೋಹನ ಮುರಳಿ ಕರೆಯಿತೊ ಎಂಬ ಭಾವಗೀತೆಯ ಸಾರಾಂಶವನ್ನಾಧರಿಸಿ ಬರೆದ ಕಥೆಗಳಲ್ಲಿ ಮೊದಲ ಸ್ಥಾನ ಪಡೆದ ಕಥೆ..


23! ಸಾಯುವ ವಯಸ್ಸಾ?? ಚಿಗುರು ಮೀಸೆ ಆಗಷ್ಟೆ ಬಲಿತು, ಹರೆಯ ತನ್ನ ಇರುಹನ್ನು ಅರುಹಿ, ಮೈ ಕೈ ಸದೃಢಗೊಂಡು, ಕಣ್ಣಲ್ಲಿ ಸಹಸ್ರ ಕನಸುಗಳು, ಮನಸ್ಸಿನಲ್ಲಿ ಮುದಗೊಳ್ಳುವ ಪ್ರಣಯದ ಪರಿಚಿತ್ರಗಳು, ಹದಗೊಳ್ಳುವ ಭಾವಗಳು ಇದಲ್ಲವೇ 23 ?? ಬುದ್ಧಿ ಬೆಳೆಯಲು, ಭಾವಗಳು ಸಿದ್ಧಿಸಲು ಕೆಲವೊಬ್ಬರಿಗೆ ಈ ವಯಸ್ಸು ಕಡಿಮೆಯೇ. 23 ಸಾಯುವ ವಯಸ್ಸಾ ? ಮತ್ತೊಮ್ಮೆ ಅದೇ ಪ್ರಶ್ನೆ ನನ್ನನ್ನು ಕಾಡಿದರೆ, ಆ ಜಾಗದಲ್ಲಿ ನನ್ನ ನಾ ಕಲ್ಪಿಸಿಕೊಂಡರೆ ಮೈ ಜುಮ್ ಎನ್ನುತ್ತದೆ. ಸ್ವಾರ್ಥ, “ದೇಶದ ಚಿಂತೆ ನಿನಗೇಕೆ?” ಎಂದುಬಿಡುತ್ತದೆಯೆನೋ?.

ಇಂತಹ 23 ರ ಹರೆಯದಲ್ಲಿ ಸುರದ್ರೂಪಿ ಭಗತ್ ಸಿಂಗ್ ನೇಣುಗಂಬ ಏರಿ ಪ್ರಾಣತ್ಯಾಗ ಮಾಡಿದನಲ್ಲಾ. ಅಬ್ಬಾ! ಅದೆಂತಹ ಸಂವೇದನೆ ದೇಶಕ್ಕಾಗಿ, ಸ್ವಾತಂತ್ರಕ್ಕಾಗಿ. ತಾಯಿ ಭಾರತೀಯ ಹಂಬಲ, ತುಡಿತ, ನೋವು ಅದೆಷ್ಟು ಆಳಕ್ಕೆ ಇಳಿದಿರಬೇಕು ಆತನ ಮನದಲ್ಲಿ. ಅದೆಂತ ಕ್ರೂರ ಬೆಳಗು. ತಾಯಿ ಭಾರತಿ ಕೂಡ ಸೂರ್ಯ ಹುಟ್ಟಿ ಬರದಿರಲಿ ಎಂದು ಬೇಡಿರಬಹುದಾ? ರಾಜಗುರು, ಸುಖದೇವ್, ಭಗತ್ ಸಿಂಗ್ ಈ ಮೂವರು ವಂದೇ ಮಾತರಂ ಘೋಷಣೆ ಕೂಗುತ್ತ ಒಂದೊಂದೆ ಮೆಟ್ಟಿಲು ಸಾವಿಗೆ ಹತ್ತಿರವಾದ ಕ್ಷಣವಿತ್ತಲ್ಲಾ..

ದೇಶವನ್ನು ಇಷ್ಟು ಪ್ರೀತಿಸುವ ನಿಮ್ಮ ಉಸಿರನ್ನು ಮತ್ಯಾವ ಮುರುಳಿಯ ರಾಗ ಕರೆಯಿತು, ಕಂಗಳ ಕನಸಾಗಿದ್ದ ದೇಶಸೇವೆಯೆಂಬ ಹೊಳಪು ಅದ್ಯಾವ ಸುಂದರ ಬೃಂದಾವನದ ಕಡೆ ಸೆಳೆಯಿತು ಎಂದು ಕಂಬನಿಯಿಕ್ಕಿದಳು ನಮ್ಮೆಲ್ಲರ ಮಾತೆ. ಇಂದಿನ ವಾಸ್ತವತೆಯೇ ನಾಳಿನ ಕಥೆಗಳಲ್ಲವಾ!? ಭೂತದ ಘಟನೆಗಳೇ ಭವಿಷ್ಯದ ಬುನಾದಿಯ ರಂಗಮಂಟಪವಲ್ಲವಾ!? ಸುಂದರ ಇತಿಹಾಸಕ್ಕೆ, ನಮ್ಮ ಬುನಾದಿಗೆ, ನಾವು ಕೊಡಲಿ ಏಟು ಹಾಕಿ, ರಕ್ತದ ಹನಿಯಿಂದ ತೋಯಿಸಿ ಮುಂದಿನ ಪೀಳಿಗೆಗೆ ಇಡುವಂಥ ನಮ್ಮ ಕಥೆ ಏನಿರಬಹುದು? ದಿನವೂ ಭಯೋತ್ಪಾದನೆಯ ದಾಳಿ, ಅದಕ್ಕೆ ನೀರೆರೆಯುವ ಇದೇ ಮಣ್ಣಿನ ಮಕ್ಕಳು. ಭಗತ್ ಸಿಂಗ್ ನಂತ ಹುತಾತ್ಮರಿಗೆ ನೀಡುತ್ತಿರುವ selute. ವಿಪರ್ಯಸವಾದರು ಸತ್ಯ. ನಾವುಗಳು ಕಥೆಯ ಪಾತ್ರದಾರರೆ. ಅದರಲ್ಲಿ ಯಾವ ಪಾತ್ರವಾಗುತ್ತೇವೆ? ಯಾವ ಮುಗುಳುನಗೆಗೆ ನೀರೆರೆಯುತ್ತೇವೆ? ಅಥವಾ ಯಾರ ಅಳುವಿಗೆ ನೆಲೆ ನಿಲ್ಲುತ್ತೇವೆ ಎಂಬುದು ನಮಗೆ ಬಿಟ್ಟಿದ್ದು.

ತೀರಗಳು ದೂರ ಇದ್ದಾಗಲೇ ತಾನೇ ಮಧ್ಯದಲ್ಲಿ ಜಲರಾಶಿ ಮೈ ತುಂಬಿ ಹರಿಯುವುದು. ಹಾಗೆ ಜಲರಾಶಿ ಮೈ ತುಂಬಿ, ಸ್ವಚ್ಛವಾಗಿ, ಸಿಹಿಯಾಗಿ ಹರಿದಾಗ ತಾನೇ ಬೃಂದಾವನವೊಂದು ಚೇತೋಹಾರಿಯಾಗಿ ಅದರ ದಡದಲ್ಲಿ ಮೈ ತುಂಬಿ ಹಸಿರು ಚೆಲ್ಲಿ ನಿಲ್ಲುವುದು. ಆ ಕಡೆಯ ತೀರದ ಬೃಂದಾವನದ ಹೂವಿಗೂ, ಈ ಕಡೆಯ ಜೇನು ಹುಟ್ಟಿನ ಸಾವಿರ ಜೇನುಗಳಿಗೂ ಮಧ್ಯ ಇರುವ ದೂರವೊಂದು ಸಮಸ್ಯೆಯಾಗಿ ಉಳಿದುಬಿಡುತ್ತಾ??

ಅರ್ಥ ಮಾಡಿಕೊಂಡಷ್ಟೇ ಬದುಕು.. ಅರ್ಥ ಮಾಡಿಕೊಳ್ಳದೇ ನಮ್ಮ ನಿಲುವಿಗೆ ನಿಲುಕದ್ದು ಕಥೆ.

-40c .. ಚಳಿಯಲ್ಲ, ಸಾವದು! ಯೋಚನೆಗೆ ನಿಲುಕದ್ದು ಎಂಬುದಿರುತ್ತದಲ್ಲ ಅದು.. ಹಿತವಾಗಿ AC ಎದುರಲ್ಲಿ ಕುಳಿತು, ಮೂವತ್ತಿಂಚಿನ TV ಯಲ್ಲಿ ವಾರದ ನಂತರ ಅಂಥ ಸಾವನ್ನು ಗೆದ್ದು ಬಂದ ಹನುಮಂತಪ್ಪ ಎಂಬ ವಾರ್ತೆಯನ್ನು ನೋಡಿದರೆ ಹನುಮಂತಪ್ಪನ ಸ್ಥಿತಿ, ದಿಟ್ಟ ಎದೆಯ ಸೈನಿಕರ ಕ್ಷಾತ್ರ, ಇಂಚಿಂಚಾಗಿ ಅವರನ್ನು ಸುಡುವ ಹಿಮಾಲಯದ ಸುಂದರ ಕ್ರೂರತೆ.. ನಮ್ಮ ಯೋಚನೆಗೆ ನಿಲುಕುವುದಲ್ಲ.

ದೂರದಿಂದ ನೋಡುವವರಿಗೆ ಹಿಮಾಲಯವೆಂಬುದು ಒಂದು ಸುಂದರ ಆಹ್ಲಾದತೆ ಅಷ್ಟೇ. ಹಿಮಾಚ್ಛಾದಿತ ಪರ್ವತಗಳು ಮುಗಿಲಿನತ್ತ ಮೈ ಚಾಚಿ, ಮಂಜು ಕವಿದು, ಬಿಳುಪನ್ನು ಹೊರಸೂಸುವ ಮಂದ್ರ ಶಿಖರಗಳು. ಹಿಮಾಲಯವೆಂದರೆ ಹಾಗೆ.. ಸಹಸ್ರ ಶಿಖರಗಳು.. ಸಹಸ್ರ ಶಿಖರಗಳ ಮಡುವಿನಿಂದ ವಯ್ಯಾರವಾಗಿ ಹರಿಯುವ ಸಹಸ್ರ ನದಿಗಳು. ಪ್ರತಿಯೊಂದೂ ಶಿಖರವನ್ನು ಬಳಸಿ ಹರಿಯುವಾಗ ಗಂಗೆಯ ಮೆರಗು, ಯಮುನೆಯ ಮಿನುಗು, ಮೂಲ ಹುಡುಕಿ ಹೊರಟರೆ ಯಾವ ದಾರಿ, ಯಾವ ತಿರುವು. ಶರದ್ ಕಳೆದು ಹೇಮಂತ ಬಂತೆಂದರೆ ಆಗಸದಿಂದ ಬಿಳುಪಿನ ಮಲ್ಲಿಗೆಯ ಸರವೇ ಮಂಜಾಗಿ ಹಸಿರಿಲ್ಲದೆ ಬೋಳಾಗಿ ನಿಂತ ಕಣಿವೆಗಳನ್ನು, ಗಿರಿಗಳನ್ನೂ ಮುತ್ತಿಕ್ಕುವ ದೃಶ್ಯವಿದೆಯಲ್ಲ ಅದೆಂತಹ ಸಮ್ಮೋಹಿನಿ. ಸ್ವಪ್ನ ತಾವರೆಯೊಂದು ಅರಳಿ, ಹೇಮಂತದ ಚಳಿಯನು ತಾಳದೆ ಸ್ವಲ್ಪ ನಲುಗಿ, ತನ್ನ ಮನಸ್ಸಿನ ಬೆಚ್ಚನೆಯ ಭಾವವನ್ನು ಹಂಚಿಕೊಳ್ಳಲು ಸಂಗಾತಿಯನ್ನು ಅರಸುತ್ತಿದ್ದಾಗ…

ಕಾಮನಬಿಲ್ಲೆಂಬ ಏಳು ಬಣ್ಣಗಳ ಚಿತ್ತಾರವೊಂದು ಮೂಡಿ ಮಳೆಯ ಚಳಿಗೂ, ಸೂರ್ಯ ಕಿರಣ ಬಿಸಿಗೂ ನಾ ಬೆಸುಗೆ ಎಂದು ಉತ್ತರಿಸಿದಾಗ… ಸ್ವಪ್ನ ತಾವರೆಯೂ, ಕಾಮನಬಿಲ್ಲಿನ ಏಳು ಬಣ್ಣಗಳು ಸೇರಿದಾಗ ಮೂಡುವ ಒಂದು ಅದ್ಭುತ ಕಲಾಕೃತಿಯಿದೆಯಲ್ಲ ಅದುವೇ ಹಿಮಾಲಯ.

ಆದರೆ ಇದೆ ಹಿಮಾಲಯದ ಸುಂದರತೆಯ ಹಿಂದಿರುವ ಇನ್ನೊಂದು ಮುಖವಿದೆಯಲ್ಲಾ.. ಅದೊಂದು ರಾತ್ರಿ ಕಳೆದಿದ್ದು ನೆನಪಿದೆ ನನಗೆ. ರಾತ್ರಿಯಲ್ಲ ಅದು, ಸಾವಿನ ನೆರಳು. ರಾತ್ರಿಯ ಎಂಟು ತಾಸೆಂಬುದು ಅಷ್ಟು ದೀರ್ಘವಾಗಿರುತ್ತದೆ ಎಂಬ ಸತ್ಯ ತಿಳಿದಿದ್ದು ಆ ಹಿಮಾಲಯದ ನೆತ್ತಿಯ ಮೇಲೆ. ಆ ಹೊತ್ತಿನ ಚಳಿ ಇದ್ದಿದ್ದಾದರೂ ಎಷ್ಟು ? ಕೇವಲ -16C. ಮೈ ಮೇಲೆ ಹಾಕಿಕೊಂಡ ದಪ್ಪನೆಯ ಜಾಕೆಟ್, ಹಿಮ ತೋಡಿ ಸರಿ ಜಾಗ ಮಾಡಿಕೊಂಡು ಹಾಕಿಕೊಂಡಿದ್ದ ಟೆಂಟ್, ಕೈಗೆ ಗ್ಲೌಸ್, ಕಿವಿಯನ್ನೂ ಮುಚ್ಚುವ ಬೆಚ್ಚನೆಯ ಟೋಪಿ, ಮೈಗೆ ಸುತ್ತಿದ ಉಣ್ಣೆಯ ಶಾಲು ಸಾಲದೆಂಬಂತೆ ಒಳಸೇರಿ ಮಲಗಲು ಸ್ಲೀಪಿಂಗ್ ಬ್ಯಾಗ್. ಇಷ್ಟು ಸಿದ್ದತೆ ಇದ್ದರೂ ಆ ರಾತ್ರಿ ನನ್ನನ್ನು ಎಷ್ಟು ಬಳಲಿಸಿತು. ಈಗಲೂ ಕೂಡ ಆ ಯೋಚನೆಯಿಂದಲೇ ಬೆನ್ನಲ್ಲಿ ನಡುಕ ಹುಟ್ಟುತ್ತದೆ.

ಹನ್ನೊಂದಾಗುವ ಹೊತ್ತಿಗೆ ಜೋರಾಗುವ ಗಾಳಿ, ಸ್ಲೀಪಿಂಗ್ ಬ್ಯಾಗಿನ ಅಡಿಯಿಂದಲೇ ನುಸುಳುವ ಚಳಿ. ಕಣ್ಣು ಮುಚ್ಚಿದರೆ ಮತ್ತೆ ತೆರೆಯುತ್ತೇನೋ, ಇಲ್ಲವೋ ಎಂಬ ಭಯ. ಉಸಿರು ಭಾರವಾಗಿ ಮೂಗಿನಿಂದ ನೀರು ಇಳಿಯುವಾಗ, ರಾತ್ರಿ ತನಗಿದ್ಯಾವುದು ಸಂಭಂದವೇ ಇಲ್ಲ ಎಂಬಂತೆ ನಿಂತೇ ಇತ್ತು. ಕೇವಲ ಹದಿನಾಲ್ಕು ಸಾವಿರ ಫೂಟ್ ಎತ್ತರದಲ್ಲಿತ್ತು ನನ್ನ ಟೆಂಟ್.

ಇಪ್ಪತ್ತು ಸಾವಿರ ಅಡಿಗಿಂತಲೂ ಹೆಚ್ಚು ಎತ್ತರದಲ್ಲಿ -40c ಚಳಿಯಲ್ಲಿ,ಹಿಮದ ಅಡಿಯಲ್ಲಿ ಸಿಲುಕಿದ ಹನುಮಂತಪ್ಪ ಲ್ಯಾನ್ಸ್ ನಾಯಕ್ ಏನೆಂದು ಯೋಚಿಸಿರಬಹುದು? ಪ್ರಜ್ಞೆ ಹೋಗುವ ಕೊನೆಯ ಕ್ಷಣಗಳ ಮೊದಲು ಆತನಿಗೆ ತಾನು ತನ್ನ ಹೆಂಡತಿಯೊಡನೆ ಹಸೆಮಣೆಯೇರಿದ್ದು, ಆಕೆಯನ್ನು ತನ್ನ ಬಾಹು ಬಂಧನದಲ್ಲಿ ಬಂಧಿಸಿ, ಪಡೆದ ಬೆಚ್ಚನೆಯ ಚುಂಬನದ ನೆನಪು. ಅವಳಲ್ಲಿ ತಾನು ಮೂಡಿಸಿಬಂದ ಬೆಚ್ಚನೆ ಬಾವಗಳು, ಆತನ ಕಂದಮ್ಮನ ನಗು, ತಾಯಿಗೆ ಮಾಡಿ ಬಂದ ಕೊನೆಯ ನಮಸ್ಕಾರ ಇದೆಲ್ಲ ರೀಲಿನಂತೆ ಸುರಳಿ ಬಿಚ್ಚಿರಬಹುದೇ ?

ಇಂತಹ ಎಷ್ಟೋ ಯೋಧರು ಹಿಮದಲ್ಲಿ ಕರಗಿ ಹೋಗುವಾಗ, ಬರುತ್ತಿರುವ ಗುಂಡಿಗೆ ಎದೆಯೊಡ್ಡಿ, ರಕ್ತ ಚೆಲ್ಲಿ, ರಕ್ತದ ಕೊನೆಯ ಹನಿ ಮಣ್ಣಲಿ ಸೇರುವ ಮುನ್ನ “ವಂದೇ ಮಾತರಂ, ಭಾರತ ಮಾತೆಯೇ ನಿನಗಿದೋ ಎನ್ನ ಪ್ರಾಣ” ಎಂದು ಉಸಿರು ತೊರೆದಾಗ. ಹೆಂಡತಿಯಲ್ಲ, ಹೆತ್ತವರಲ್ಲ, ಊರವರೊಂದೆ ಅಲ್ಲ ಭಾರತ ಮಾತೆಯು ಅಳುತ್ತಿದ್ದಾಳೆ.ಮನುಷ್ಯನೇ ಸೃಷ್ಟಿಸಿಕೊಂಡ ಸ್ವಾರ್ಥದ ಗಡಿಯೆಂಬ ಬೇಲಿಯ ಒಳಗೆ ಪ್ರತೀ ಕ್ಷಣವೂ ಗುಂಡಿನ ರಿಂಗಣ ಕಿವಿಯನ್ನಪ್ಪಳಿಸಿ ಕರ್ಣ ಪಟಲ ಹರಿಯುತ್ತಿದ್ದರೆ, ಪ್ರತಿ ರಿಂಗಣದ ಕೊನೆಯಲ್ಲಿ ತನ್ನ ಪ್ರೀತಿಸುವ ಮಗನ ಎದೆ ಬಿರಿಯುತ್ತಿದೆಯೆಂದು ಕೊರಗುತ್ತಿದ್ದಾಳೆ.

20 ಲಕ್ಷ!! ಇಪ್ಪತ್ತು ಲಕ್ಷಕ್ಕೂ ಹೆಚ್ಚು ಜನ ಸಾಯುವುದು, ಕೋಟಿಗೂ ಹೆಚ್ಚು ಜನ ನಿರಾಶ್ರಿತರಾಗುವುದು, ಭಾರತ! ಭರತ ಹುಟ್ಟಿದ ನಾಡು!! ಇದಕ್ಕೂ ಸಾಕ್ಷಿಯಾಗಿ ಹೋಯಿತಲ್ಲಾ. ಮನುಕುಲದ ಇತಿಹಾಸದಲ್ಲೇ ಅತಿ ದೊಡ್ಡ ದೊಂಬಿ ಮತ್ತು ಗುಳೆ ಹೋದ ಚಿತ್ರಣ ನಮ್ಮ ಸ್ವಾತಂತ್ರ್ಯಕ್ಕೊಂದು ಕಪ್ಪು ಚುಕ್ಕೆಯನ್ನು ನೀಡಿದ್ದು ಸುಳ್ಳಲ್ಲ.  ಹಿಂದೂ ಮುಸ್ಲಿಂ ಭಾಯಿ-ಭಾಯಿ ಆಗಿ ಒಗ್ಗೂಡಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಇನ್ನೇನು ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಬೇಕು ಎಂಬ ಹೊಸ್ತಿಲಲ್ಲಿ…

ಕೇವಲ ಅಧಿಕಾರದ ಆಸೆಗಾಗಿ, ಆಡಳಿತದ ಚುಕ್ಕಾಣಿಗಾಗಿ ಅಖಂಡವಾದ ಭಾರತವನ್ನು ಬೇಲಿಯಿಂದ ಬೇರೆ ಬೇರೆ ಚೂರಾಗಿಸಿ ಪಾಕಿಸ್ತಾನ, ಹಿಂದೂಸ್ಥಾನ ಎಂದು ಹೆಸರಿಟ್ಟು ರಾತ್ರೋ ರಾತ್ರಿ ರಕ್ತದ ಕೋಡಿ ಹರಿದ ದಿನ.. ತನ್ನ ಮಡಿಲಲ್ಲಿ ಒಟ್ಟಾಗಿಯೇ ಆಡಿದ ಮಕ್ಕಳು ದಾಯಾದಿ ಕಲಹವಾಗಿ, ಮಾಂಸದ ಮುದ್ದೆಗಳಾಗಿ ಮಲಗಿದ್ದನ್ನು ಕಂಡು ಭಾರತ ಮಾತೆ “ಇರುವುದನ್ನೆಲ್ಲವನ್ನ ಬಿಟ್ಟು ಇಲ್ಲದಿರುವುದರ ಕಡೆಗೆ ತುಡಿಯುವುದೇ ಜೀವನ” ಎಂದು ಅಳುತ್ತಲೇ ಸ್ವಗತ ಹಾಡಿಕೊಂಡಿದ್ದು ನಿಜವೇ.

ಸ್ವಾತಂತ್ರ್ಯವಿಲ್ಲದಾಗ ಸ್ವಾತಂತ್ರ್ಯಕ್ಕೆ ಹೋರಾಡಿದ ಜನ ನಂತರ ದೇಶ, ಭಾಷೆ, ಮತ ಎಂದು ಹೋರಾಡಿದರು. ಅದು ಸಿಕ್ಕೊಡನೆ ಮತ್ತೊಂದು. ಇಲ್ಲದ ಬೇಲಿಯನ್ನು, ಮುಗಿಯದ ಬಯಕೆಗಳನ್ನು ಬೆನ್ನಟ್ಟತೊಡಗಿದ ಮನುಷ್ಯ. ಭೂಮಿಯೆಂಬ ಈ ಪುಟ್ಟ ಪ್ರಪಂಚದಲ್ಲಿ ಅದೆಷ್ಟು ಬೇಲಿಗಳು. ಎಲ್ಲ ದೇಶಗಳಲ್ಲಿ, ಜನರ ಮನಸಲ್ಲಿ ಇಂಥದೇ ಬೇಲಿಗಳು. ಇಲ್ಲದುದರೆಡೆಗೆ ಓಟ.

ಸಪ್ತ ಸಾಗರಗಳಲ್ಲೂ ಸುಪ್ತವಾಗಿ ತುಂಬಿಕೊಂಡಿರುವ ಭೂ ತಾಯಿ ಇದೆಲ್ಲವನ್ನು ನೋಡಿ ದುಃಖಪಡುತ್ತಿದ್ದಾಳೆ. ಅದೆಷ್ಟೋ ಭಗತ್ ಸಿಂಗ್, ಲ್ಯಾನ್ಸ್ ನಾಯಕ್ ಸತ್ಯದೆಡೆಗೆ ತುಡಿಯುವ, ನ್ಯಾಯದೆಡೆಗೆ ನಡೆಯುವ ಪ್ರತಿಯೊಬ್ಬರ ಮೂಕ ರೋದನವೂ ಅವಳ ಮನಸ್ಸನ್ನು ಮುಟ್ಟುತ್ತಿದೆ; ಎದೆಯ ಬಾಗಿಲನ್ನು ತಟ್ಟುತ್ತಿದೆ. ತನ್ನ ಚೇತನಗಳು ವಿವಶವಾಗುತ್ತಿರುವುದರ ನೋವು ಸಹಿಸಲಾಗದೆ ಸೊರಗುತ್ತಿದ್ದಾಳೆ ಭೂ ತಾಯಿ. ಕೊನೆಯಲ್ಲಿ ಭಾರತ ಮಾತೆಯು ಕೂಡ ಈ ಭುವಿಯ ಮಗಳೇ ಅಲ್ಲವೇ.

ನಮ್ಮಲ್ಲಿ ನಾವೇ ಯೋಚಿಸಿಕೊಂಡರೆ ನಾವು ಕೂಡ ಈ ಕಥೆಯಲ್ಲಿ ಪಾತ್ರಗಳೇ.

-ಗೌತಮ ಹೆಗಡೆ

Posted in ಕಥಾಸರಣಿ, ಗೀತ್ ಕಹಾನಿ | Tagged , , | Leave a comment

ಹೀಗೊಂದು ಪ್ರೇಮ ಕಾವ್ಯ..

pinky-love
ಬರುವೆಯಲ್ಲವೇ ಓ ಗೆಳತಿ?

ಏಕೋ ಏನೋ ಒಂಟಿ ಎನಿಸಿದೆ
ಭಾರವಾಗಿದೆ ಮನಸು ನೂರಾರು
ಕನಸುಗಳು ಕಾತರದಿ ಕುಳಿತಿದೆ
ನಿನ್ನ ಸನಿಹವಾ ಬಯಸಿ

ಪ್ರಕೃತಿ ಸೌಂದರ್ಯವಾ ಅರಸಿ ಬಂದೆ
ನೀನಿಲ್ಲದಾ ಮನಸಿಂದ
ಕಣ್ಣು ಆಲಂಗಿಸಿದೆ ಮನಸು ಅಲ್ಲಗಳೆದಿದೆ
ಭಾವನೆ ಬತ್ತಿದ ಮನಸಿಂದ

ಕಣ್ಣಹನಿ ನೀರಾಗಿ ಹರಿದಿದೆ
ತಣ್ಣನೆಯ ಗಾಳಿಗೂ ಮೈ ಬೆವರುತಿದೆ
ಮನದುಂಬಿ ಬಂದೆ ನಿನ್ನ ಹಿಂದೆ
ವರ್ಣದಾ ಛಾಪು ಮೂಡಿಸಲು

ಬಾನ ಬನವು ಹಸಿರಾಗಿದೆ
ನನ್ನ ಮನವು ಉಸಿರಾಗಿದೆ
ನಿನ್ನ ದಾರಿ ಕಾಯುತಾ ಕುಳಿತಿದೆ
ನೀನು ಸನಿಹ ಬಾರದೇ ಹೋದೆ

ದಾರಿ ಕಾಯುತಾ ಕುಳಿತಿರುವೆ
ಭಗ್ನ ಪ್ರೇಮಿಯಾಗಿ
ನಿನ್ನ ಮನಸೇ ಹುಡುಕುತಿದೆ
ಚಾತಕ ಪಕ್ಷಿಯಾಗಿ

ಮತ್ತೇಕೆ ಬಾರದೇ ಹೋದೆ
ಈ ನನ್ನ ಬಾಳ ಬನಕೆ
ಹಸಿರಾಗುವೆ ನಿನ್ನ ಉಸಿರಾಗುವೆ
ನಿನ್ನ ಉಸಿರಿಗೆ ನೆರಳಾಗುವೆ
ಬರುವೆಯಲ್ಲವೇ ಓ ಗೆಳತಿ?


ನಡೆ ಮುಂದೆ ಈ ಜೀವ ಅಳಿವವರೆಗೆ..

ಬದುಕೊಂದು ಸುಂದರ ಗೂಡು
ಸಂತೋಷ ಸಮರದಾ ಬೀಡು
ಪ್ರೀತಿ ಪ್ರಣಯವುಂಟು
ಕೋಪ ತಾಪವುಂಟು
ಸಂಸಾರದಾ ಸುಳಿಯಲ್ಲಿ ಸಿಕ್ಕ ಬಂಧಿ ನಾನು
ಕನಸೆಂಬ ದೋಣಿಯಲಿನ ನನಸೆಂಬ ಹುಟ್ಟು ನೀನು
ಓ ಮನಸೇ ನಿನ್ನ ನಡೆಯೇ ಒಂತರ
ಅದೇ ಜೀವನದಾ ಹಂದರ
ಇಂದಿನಾ ಕೆಲಸ ಮುಗಿದಿದೆ
ಮುಂದಿನಾ ಕೆಲಸ ಉಳಿದಿದೆ
ನಡೆ ಮುಂದೆ ಈ ಜೀವ ಅಳಿವವರೆಗೆ..

-ಸಚಿನ್ ಹೆಗಡೆ

Posted in ಕವಿ - ಕಾವ್ಯ, ಕವಿ ಕಲ್ಪನೆ | Tagged , , , , | Leave a comment

ವೃತ್ತದ ಹುಚ್ಚ

hucha
ಅರೆ ಬಿಳಿ ಕೂದಲು ಕೆದರಿದೆ
ಕುರುಚಲು ಗಡ್ಡವು ಮುಸುಕಿದೆ
ಅಚ್ಚ ಕೆಂಪಂಗಿ, ಕಚ್ಚೆಗೆ ಕೊಚ್ಚೆ ಲೇಪವಿದೆ
ಉಚ್ಛರಿಸಲು ತೊದಲುವ ಹುಚ್ಚ ಓಲುತ್ತಾ
ಕುಡಿದು ಕುಪ್ಪಳಿಸಿದ್ದಾನೆ ವೃತ್ತದ ಸುತ್ತಾ..

ಓಲಾಟದಲ್ಲಿ ಕುಣಿತವಿದೆ, ಗಾನವಿದೆ, ಕಿರುಚಾಟವಿದೆ
ಐವತ್ತರಲ್ಲಿ ಇಪ್ಪತ್ತರ ಹಾಡು
ಸೆಕೆಯಲ್ಲೂ ‘ಚಳಿ ಚಳಿ ‘ ಹಾಡು !
ಹೊಟ್ಟೆಗೆ ಶಿವಪ್ಪನ ಹಾಡು
ಸುತ್ತಿದ್ದೇನೆಂದು ಮೂರೂರು
ಸುತ್ತುತ್ತಾನೆ ಆರು ಬಾರು..

ಕೊರತೆಯಾದರೂ ಊಟ
ಬರವಾಗದು ಕುಡಿವಾಟ
ಕಾಣುವಳಾಗ ‘ಸಾರಾಯಿ ಶೀಶೆಯಲವನ ದೇವಿ’
ಒದರುವನವಳು ನನ್ಹೆಂಡ್ತಿ ಇನ್ನೂ ಭಾವಿ
ಚಿತ್ರವೊಂದಿದೆ ಅಲ್ಲವಳಿಗೆ ಹದಿನೆಂಟು
ಗಾತ್ರ ಹೊಂದಿದೆ ಗಾಯ ಅದಕಿಪ್ಪತ್ತೆಂಟು..

ಯಕ್ಷ ಕುಣಿತಕ್ಕೆ ಸಿನಿಮಾ ಗಾಯನ
ಹಾದಿ ಬದಿಯಲಿ ಡಂಗುರ ನರ್ತನ
ಉದರ ತಾಳಕೆ ಗುಡಿಗೆ ಸವಾರಿ
ಬಾಳೆ ಬಿಳಿಭಾಗದಲಿ ಪರಮಾನ್ನದ ಸವಿ ಹೀರಿ
ತುಂಬು ಹೊಟ್ಟೆಯಲಿ
ಗುಡಿಸುತ್ತ ಫೇರಿ..

ಅರಳಿ ಮರದಡಿ ಶಯನ
ಉತ್ತರಕೆ ತಲೆ ನೋಟ
ಗೋರೆಯುವ ನೀರೆರಚುವರೆಗೂ
ನೀಡುವ ಜೀವವ ಬಿಟ್ಟ ಬೀಡಿಗಳಿಗೂ
ತೆರಳುವ ಕಾಲೇಜಿಗೆ ಸ್ಫುರದ್ರೂಪ ವೀಕ್ಷಣೆಗೆ
ನೋಡುವನು ಹಣೆಗೆ ಕೈ ಕೊಟ್ಟು
ತಿರುವ ತುದಿಯಲಿ ಮುಖಗಳು ಸರಿವ ಹೊತ್ತು
ಒರೆಸಿಕೊಳ್ಳದೇ ಸುರಿವ ಜೊಲ್ಲು ಬೊಟ್ಟು..

ಸಂಧ್ಯಾವಂದನೆಗೆ ‘ತೀರ್ಥಕ್ಷೇತ್ರ ‘ ಭೇಟಿ
ಬಾರಿಗೆ ತಿರುಗಲು ಇವಗಿವನೇ ಸಾಟಿ
ವೆಂಕಟೇಶ,ಗೋಪಾಲ,ಗೋವಿಂದ…
ಬಾರಿನ ನಾಮಧೇಯಗಳೇ ನಿತ್ಯಾನಂದ

ವ್ಯಯವಿಲ್ಲ ನಾಕು ಪೈಸೆ
ಸುರಿಯುವನು ಎಂಟು ಬೊಗಸೆ
ಏನೇನೋ ಗೊಣಗುಟ್ಟು
ವೃತ್ತದ ಕಟ್ಟೆಗೆ ತಲೆಕೊಟ್ಟು
ಗುಂಯ್ ಗುಡುವ ಸೊಳ್ಳೆಗೆ ಕಿವಿಗೊಟ್ಟು
ಮಲಗುವನು ಪ್ರೇಯಸಿಯ ಕನಸ ತೊಟ್ಟು..

ಸೂರ್ಯಗೋಚರಕ್ಕೆ ಮುಖಕೆ ಜಲಪ್ರೋಕ್ಷಣ
ಕೃಪೆ ತೋರದೇ ವರುಣ ಜಳಕ ಕಾಣ
‘ಭವತಿ ಭಿಕ್ಷಾಂದೇಹಿ ‘ ಬೆಳಗಿನ ಪ್ರಾಶನ

ನಡೆದಿದೆ ಜೀವನ ಏಳುತ್ತಾ ಬೀಳುತ್ತಾ
ಕೆರೆಯುತ್ತಾ ಕಿರುಚುತ್ತಾ ಕುಣಿಯುತ್ತಾ
ಕೊರಗುತ್ತಾ ಒರಗುತ್ತಾ
ಪರಿಪರಿ ಪರಿಪಾಟಲು ಪಡುತ್ತಾ
ಪತಿತ ಪರಂಪರೆಯನ್ನು ಅನುಭೂತಿಸುತ್ತಾ..

ದಿಕ್ತೋಚದ ಕರುವಂತೆ ತಿರುಗಿದೆ ಚಿತ್ತ
ದಿಙ್ಮೂಢತೆ ಎಂಬಂತೆ ಸುತ್ತಿದೆ ಅತ್ತಿತ್ತ
ಕದಲಿಸದ ಬದುಕಿದು ಬದಲಾಗದೆಂದೂ
ಬಡಪಾಯಿ ಕಾಯವಿದು ಬರಡಾಗಿದೆ ಇಂದು
ಬಯಸುತಿದೆ ಅಸ್ತಮಿಪ ರವಿಯ ಸೇರೆಂದು..

-ಸಂದೇಶ ಹೆಗಡೆ ಸಂಪ

Posted in ಕವಿ - ಕಾವ್ಯ, ಕವಿ ಕಲ್ಪನೆ | Tagged , , | Leave a comment

ಶ೦ಕರ

ಜಾಣ ಜಾಣೆಯರ ಜಗಲಿ ಫೇಸ್ ಬುಕ್ ಬಳಗದಲ್ಲಿ ಆಯೋಜಿಸಿದ ಗೀತ್ ಕಹಾನಿ ಕಥಾಸ್ಪರ್ಧೆಯಲ್ಲಿ ಯಾವ ಮೋಹನ ಮುರಳಿ ಕರೆಯಿತೊ ಎಂಬ ಭಾವಗೀತೆಯ ಸಾರಾಂಶವನ್ನಾಧರಿಸಿ ಬರೆದ ಕಥೆಗಳಲ್ಲಿ ತೃತೀಯ ಸ್ಥಾನ ಪಡೆದ ಕಥೆ..


ಪಕ್ಕದ ಮನೆಯ ರಾಧಕ್ಕನಿಗೆ ಮೂರನೆಯ ಮಗು ಹುಟ್ಟಿತು.ಹುಟ್ಟಿದ್ದೂ ಅಷ್ಟಾವಕ್ರವಾಗಿತ್ತು… ಕೇಳಬೇಕಾ? ತಲೆಗೊ೦ದು ಮಾತು. ಈ ವಯಸ್ಸಿಗೇತಕ್ಕೆ ಬೇಕಾಗಿತ್ತು ಮೂರನೆಯ ಮಗು .., ನಲವತ್ತೈದಕ್ಕೆ, ಎ೦ದು ಒಬ್ಬರು ಹೇಳಿದರೆ .,ಇನ್ನೊಬ್ಬರು ನುಡಿದರು.. ದೇವರಿದ್ದರೂ ಇರಬಹುದೆ೦ದು.. ನಾಲ್ಕು ಕೈಯಿದೆ(ದೂರದರ್ಶನದ ಸುದ್ದಿ ಸಮಾಚಾರದಲ್ಲೆಲ್ಲೊ ನೋಡಿರುವುದಷ್ಟೆ ಬಿಹಾರ, ಉತ್ತರ ಪ್ರದೇಶಗಳೆಡೆಯೆಲ್ಲೋ ಈ ತರಹದ ಮಗುವಾಗಿದ್ದು..ಸಿದ್ದಾಪುರದ ಕಡೆ ಇದು ತೀರಾ ಹೊಸದು.) ಏನು ಮಾಡಬೇಕೆ೦ದೆ ತೋಚುತ್ತಿರಲಿಲ್ಲ ರಾಧಕ್ಕ ಹಾಗೂ ದಿವಾಕರಭಾವನಿಗೆ. ಡಾಕ್ಟರರೂ ಮೊದಲು ಏನೂ ಹೇಳಿಲ್ಲ,… ಡಾಕ್ಟರುಗಳೆಲ್ಲಾ ದುಡ್ಡು ನು೦ಗುವವರೇ… ಸರಿಯಾಗಿತಪಾಸಣೆಯನ್ನೂ ಮಾಡಿಲ್ಲ… ಹೇಗೋ ಒಂದು ಡಿಗ್ರಿ ಗಿಟ್ಟಿಸಿಕೊ೦ಡು ಬ೦ದು ಕೂತು ಬಿಟ್ಟವರಿವರು… ನಮ್ಮ ಗ್ರಹಚಾರಕ್ಕೆ ಸರಿಯಾಗಿ ಸಿಕ್ಕರು..ಎ೦ದು ತಮ್ಮ ಗ್ರಹಚಾರವನ್ನು ಹಳಿದುಕೊ೦ಡರು… ಮೈಯೆಲ್ಲಾ ಪರಚಿಕೊ೦ಡು ಬಿಡೋಣವೆ೦ದೆನಿಸಿತು….. ದಿವಾಕರಭಾವನಿಗೆ ಹೇಳುವುದಾದರೂ ಯಾರಿಗೆ…

ರಾಧಕ್ಕನ ಅತ್ತೆ ಮಾವ೦ದಿರಿಗೋ ಮೂರನೆಯದಾದರೂ ಗ೦ಡಾಗಬಹುದೆ೦ಬ ತು೦ಬಾ ಆಸೆಯಿತ್ತು… ಹುಟ್ಟಿದ್ದೇನೋ ಗ೦ಡು ಮಗುವೇ ಆದರೆ… ಈ ಥರಾ… ರಾಧಕ್ಕನ ಅತ್ತೆ ಮಾವನೊಡನೆ ಹೇಳಿದರು… ರೀ., ಈ ಮಗು ದೇವರೇ ಇದ್ದರೂ ಇರಬಹುದು… ಯಾವುದಕ್ಕೂ ಆಚೆ ಮನೆ ರಾಮಣ್ಣನಿಗೆ ಕೇಳಿದರೆ ಗೊತ್ತಾಗುತ್ತೆ..ಅವರಿಗೆ ಹೇಗೂ ದೇವರು ಮೈಯಲ್ಲಿ ಬರುವುದಲ್ಲಾ ಎ೦ದು.. ರಾಮಣ್ಣನಿಗೆ ಕೇಳಲು ಆಕ್ಷಣವೇ ಹೊರಟರು… ಮೈಮೇಲೆ ಬ೦ದಿರುವ ದೇವರು ಆ ಮಗು ಶ೦ಕರ ದೇವರ ಅವತಾರವೆ೦ದು ಹೇಳಿಬಿಡಬೇಕಾ?

ಶ೦ಕರನೆ೦ಬ ನಾಮಕರಣವನ್ನೂ ಮಾಡಿದ್ದಾಯಿತು… ಯಾರನ್ನೂ ಕರೆಯಲು ಮನಸ್ಸಿಲ್ಲದೇ ನಾಮಕರಣ ಶಾಸ್ತ್ರ ಪೂರೈಸಿದ್ದೂ ಆಯಿತು…ಕೆಲವರು ಬ೦ದು ನಮಸ್ಕರಿಸಲೂ ಪ್ರಾರ೦ಭಿಸಿದರು…. ದಿನಾ ಒಂದು ರಗಳೆಯೇ ಶುರುವಾಯ್ತು…..

ಇನ್ನೊ೦ದು ಕಷ್ಟವೆ೦ದರೆ… ನಾಲ್ಕು ಕೈ ಇರುವುದರಿ೦ದ ….. ಎಲ್ಲದಕ್ಕೂ ಬಳಸಿ ಎರಡು ಕೈ ಹೆಚ್ಚಾಗಿ ಹೋಗುತ್ತಿತ್ತು.ಹೆಚ್ಚಾಗಿದೆಯೆ೦ದು ಕತ್ತರಿಸಿ ಇಟ್ಟುಕೊಳ್ಳಲು ಬರುವುದೇ?ಇಲ್ಲವಲ್ಲ..ಅದಕ್ಕೆ ದೊಡ್ಡ ಶಸ್ತ್ರ ಚಿಕಿತ್ಸೆಯನ್ನೇ ಮಾಡಬೇಕು.

ದೇವರು ಎ೦ದು ರಾಮಣ್ಣ .,ದೇವರು ಮೈಯಲ್ಲಿ ಬ೦ದಾಗ ಹೇಳಿರುವುದಕ್ಕೆ… ಇನ್ನು ಮು೦ದೆ ಶಾಲೆಗೆ ಕಳುಹಿಸಲೂ ಸಾಧ್ಯವಾಗದು…. ಶಸ್ತ್ರ ಚಿಕಿತ್ಸೆ ಮಾಡಲೂ ಆಗದು.  ಎಲ್ಲರೂ ದೇವರೆ೦ದುಕೊ೦ಡರೂ ಶ೦ಕರ ಚಿಕ್ಕವನೇ ಅಲ್ಲವೇ?ಅ೦ಬೆಗಾಲಿಕ್ಕಲು ನೋಡಿದರೆ ಕೈ ತೊ೦ದರೆ ಕೊಡುತ್ತಿತ್ತು… ನಿ೦ತುಕೊಳ್ಳಲು ಪ್ರಯತ್ನಿಸಿದರೆ ಮತ್ತೊ೦ದು ತರಹ. ಇನ್ನೇನು ಮಾಡಬೇಕೆ೦ದು ತಲೆಬಿಸಿ., ಕಿರಿಕಿರಿಯಾಗತೊಡಗಿತು. ಒಂದೊ೦ದು ಸಲ ಅನ್ನಿಸುತ್ತಿತ್ತು ದೇವರು ಕೊಡುವುದು ಕೊಟ್ಟ… ಇ೦ತಹ ಮಗುವೇಕೆ ಕೊಟ್ಟನೋ ಯಾವ ಜನ್ಮದ ಕರ್ಮಫಲವೋ ಎ೦ದು.

ಶಾಲೆಗೆ ಆಚೀಚೆ ಮನೆಯ ಮಕ್ಕಳ ಹೆಸರ ಸೇರಿಸಿ ಬರುತ್ತಿದ್ದರು.. ಶ೦ಕರನ ವಯಸ್ಸಿನವರೇ ಆದ ವಿಶಾಲ್, ಸ್ಪ೦ದನಾ ಕೂಡ ಶಾಲೆಗೆ ಹೋಗಿಬರ ತೊಡಗಿದರು… ಶಾಲೆಗೆ ಸೇರಿಸಲೂ ಮುಜುಗರ… ಎಲ್ಲರೂ ವಿಚಿತ್ರ ದೃಷ್ಟಿಯಿ೦ದ ನೋಡಿದರೆ೦ಬ ಭಯ., ಮಗು ನೊ೦ದುಕೊ೦ಡರೆ ಎ೦ಬ ನೋವು ಜೊತೆಗೆ ದೇವರೆ೦ಬ ಪಟ್ಟ ಶ೦ಕರನ ಶಾಲೆಗೆ ಸೇರಿಸದ೦ತೆ ತಡೆದಿತ್ತು…

ದಿವಣ್ಣಾ ಮತ್ತೇನು ಸಮಾಚಾರ..ಈಗ ಶ೦ಕರ ಏನು ಮಾಡ್ತಿದಾನೆ?ಎ೦ದು ಕೇಳುವವರೆ. ಸಾಲದ್ದಕ್ಕೆ ಟಿವಿ ಚಾನೆಲ್ನವರು ಬ೦ದು ವಿಡಿಯೋ ಬೇರೆ ತೆಗೆದು ಹೋದರು… ಏನೋ ಅದ್ಭುತ ಸಾಧನೆ ಮಾಡಿ ಹೀಗೆ ಟಿವಿಯಲ್ಲಿ ಹಾಕಿದ್ದರೆ..ಅತೀವ ಸ೦ತಸವಾಗುತ್ತಿತ್ತು… ಇದಾದರೆ ಹಾಗಲ್ಲ… ಎಲ್ಲವೂ ಸರಿಯಾಗಿದ್ದಿದ್ದರೆ….. ಎ೦ದು ದುಃಖಿಸುತ್ತಾ.,ಉಗುಳಲೂ ಆಗದ ನು೦ಗಲೂ ಆಗದ ಬಿಸಿ ತುಪ್ಪ ಎ೦ದು ಹಣೆ ಬಡಿದುಕೊ೦ಡರು ದಿವಾಕರಭಾವ.

ಪ್ರಜ್ಞಾ,ಪ್ರಣೀತಾ ದಿವಾಕರಭಾವನ ಹಿರಿಯ ಮಕ್ಕಳು ಶಾಲೆಯಿ೦ದ ಬ೦ದವರೇ*ಅಪ್ಪಾ.,ಎಲ್ಲರೂ ಶ೦ಕರನ ಬಗೆಗೆ ವಿಚಿತ್ರವಾಗಿ ಕೇಳುವವರೇ ಎ೦ದರು. ಒಳಗಿ೦ದ ದುಃಖವೆನಸಿದರೂ ತೋರಗೊಡದೆ ಯಾರೇನೆ ಹೇಳಲಿ ಹೆತ್ತವರ,ಒಡಹುಟ್ಟಿದವರ ಮುದ್ದು ಅವನು… ನಮ್ಮ ಶ೦ಕರ ಅಪರ೦ಜಿ… ನೋಡಲ್ಲಿ ಪ್ರಜ್ಞಾ ಏನೋ ತು೦ಟತನವೆಸಗಿ ನಗುತ್ತಿದ್ದಾನೆ ಎ೦ದು ವಿಷಯ ಮರೆಸಲು ಪ್ರಯತ್ನಿಸಿದರು ಅಪ್ಪ ದಿವಾಕರ ಭಾವ, ಮನದಲ್ಲಾಗುವ ಹಿ೦ಸೆಯ ತೋರಗೊಡದೆ ಅದುಮಿಟ್ಟುಕೊಳ್ಳುವುದ ರೂಢಿಗೊಳಿಸಿಕೊ೦ಡುಬಿಟ್ಟಿದ್ದರು…. ದಿವಾಕರಭಾವ… ರಾಧಕ್ಕ……

ಶ೦ಕರ ಸಣ್ಣವನಿದ್ದರೂ ಅವನ ಬುದ್ಧಿ ಬಲು ಚುರುಕಾಗಿತ್ತು….ಅಜ್ಜಿಯ ಬಳಿ ಪ೦ಚತ೦ತ್ರದ ಕಥೆಗಳು.,ಮಹಾಪುರುಷರ ಕಥೆಗಳನ್ನೆಲ್ಲ ಕೇಳಿ…ನೂರೆ೦ಟು ಪ್ರಶ್ನೆ ಗೈದು..ತಕ್ಕ ಉತ್ತರ ಪಡೆದ ಮೇಲೇ ಶಾ೦ತನಾಗುತ್ತಿದ್ದ ಸ೦ತಸದಿ…. ಅಜ್ಜ ಅಜ್ಜಿ ಅವನ ನೋಡಿ ಸ೦ಭ್ರಮಿಸಲು ಹೆಚ್ಚು ಸಮಯ ಉಳಿಯಲಿಲ್ಲ…ಆರು ತಿ೦ಗಳ ಅವಧಿಯಲ್ಲೇ ಇಬ್ಬರೂ ತೀರಿಕೊ೦ಡರು.ಕೆಲವು ಸಮಯ ಮ೦ಕಾಗಿ ಕುಳಿತುಬಿಡುತ್ತಿದ್ದ ಶ೦ಕರ ಅಜ್ಜ ಅಜ್ಜಿಯರ ನೆನೆದು…ಆಗ ರಾಧಕ್ಕ ದಿವಾಕರಭಾವ ಅವನ ಸಮಾಧಾನಪಡಿಸುತ್ತಿದ್ದರು. ಹೀಗೇ ಎರಡು ವರ್ಷ ಕಳೆಯಿತು… ಈಗ ಮನೆಯವರಿಗೂ ಹೊರಗಿನವರಿಗೂ ಶ೦ಕರನ ನೋಡಿ ರೂಢಿ ಆಗಿರುವುದಕ್ಕೆ ಅಷ್ಟೊ೦ದು ಯಾರೂ ವ್ಯ೦ಗ್ಯವಾಡುತ್ತಿರಲಿಲ್ಲ…ಶ೦ಕರನೂ ದೊಡ್ಡವನಾಗುತ್ತಿದ್ದ…ಅಕ್ಷರ ಓದಲು ಬರೆಯಲು ದಿವಾಕರ ಭಾವ ಮನೆಯಲ್ಲಿ ಕಲಿಸತೊಡಗಿದರು…(ಕಲಿಯಲು ತಕ್ಕಮಟ್ಟಿಗಿದ್ದ..ಕೆಲವು ದಿನಗಳಲ್ಲಿ ಕಥೆಪುಸ್ತಕಗಳ ಓದುವಷ್ಟು ಕಲಿತ)

ಉಳಿದ ಸಮಯವೆಲ್ಲಾ ಅವರ ಮನೆಯ ದೊಡ್ಡಿಯಲ್ಲಿರುವ ಎಮ್ಮೆ ದನಗಳ ಜೊತೆಯೇ ಕಳೆಯುತ್ತಿದ್ದ…ಟೇಪ್ ರೆಕಾರ್ಡರ್ನಲ್ಲಿ ಸದಾ ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು ಹಾಡು ಕೇಳುತ್ತಿದ್ದ… ರಾಧಕ್ಕನಾಗಲಿ .. ದಿವಾಕರಭಾವನಾಗಲಿ ಏನೂ ಹೇಳುತ್ತಿರಲಿಲ್ಲ…ಆದರೆ ಊರವರಿಗೆ ನಗುವುದಕ್ಕೊ೦ದು ಗ್ರಾಸ ಬೇಕಲ್ಲ.. ಹಾಗಾಗಿ ಮತ್ತೆ ಪ್ರಾರ೦ಭಿಸಿದರು..ಇವನು ಎಮ್ಮೆ ದನಗಳ ಜೊತೆಗೆ ಇದ್ದು ಎಮ್ಮೆ ತಮ್ಮಣ್ಣನಾಗುವವನೆ ಎ೦ದು ವ್ಯ೦ಗ್ಯವಾಡತೊಡಗಿದರು. (ಇತ್ತೀಚೆಗೆ ದೇವರು ಎ೦ದು ಹೇಳಿದ್ದು ಮರೆತು..ವಿಚಿತ್ರವಾಗಿ ಹುಟ್ಟಿದವ ಎ೦ದು ನಿರ್ಧರಿಸಿಯೂ ಬಿಟ್ಟಿದ್ದರು.). ಇದೆಲ್ಲ ಕೇಳಿ ಮನದಲ್ಲಿ ಶ೦ಕರ ಮೊದಮೊದಲು ಮರುಗುತ್ತಿದ್ದರೂ ಕ್ರಮೇಣ ಏನು ಮೂಢರು ಅ೦ದುಕೊಳ್ಳತೊಡಗಿದ… ಯಾಕೆ೦ದರೆ ಅಷ್ಟು ಒಳ್ಳೆಯ ಸ೦ಸ್ಕಾರ ನೀಡಿದ್ದರವಗೆ… ಜೀವನದಲ್ಲಿ ಏನಾದರೂ ಸಾಧಿಸಬೇಕೆ೦ದು ದೃಢನಿರ್ಧಾರ ತೆಗೆದುಕೊ೦ಡಿದ್ದ. ಆದರೆ ಏನು ಮಾಡಬೇಕೆ೦ದು ತೋಚುತ್ತಿರಲಿಲ್ಲ.. ಇನ್ನೂ ಹದಿಹರೆಯ ಕಾಲಿಟ್ಟಿತ್ತು.

ಅ೦ದು ಯಾರೋ ಒಳ್ಳೆಯ ಛಾಯಾಗ್ರಾಹಕ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವಕ್ಕೆ ಬ೦ದಿದ್ದ.ಅವನಿಗ್ಯಾರೋ ಶ೦ಕರನ ಬಗ್ಗೆ ಹೇಳಿದ್ದೆ ತಡ ಸೀದಾ ಪಕ್ಕದಮನೆಯ ಚ೦ದ್ರಣ್ಣನೊಡನೆ ಬ೦ದ ಮನೆಗೆ. ಜಗುಲಿಯಲ್ಲಿ ಕುಳಿತ ಶ೦ಕರನ ನೋಡಿ ಅವನೋ ಫೋಟೋ ತೆಗೆದೇ ತೆಗೆದ.ಯಾವುದಾದರೂ ಪತ್ರಿಕೆಗೆ ಕಳುಹಿಸಿ ಹೆಸರುಗಳಿಸಬಹುದೆ೦ದು. ಅವನ ಸ೦ಕುಚಿತ ಮನೋಭಾವ ಅರ್ಥೈಸಿಕೊ೦ಡ ಶ೦ಕರ ಮನದಲ್ಲೇ ಅ೦ದುಕೊ೦ಡ..ಎ೦ತಹ ವಿಚಿತ್ರಮನಸ್ಸಿನವರಿರು…ಎ೦ದು.ಥಟ್ಟನೆ ಏನೋ ಹೊಳೆಯಿತು ಶ೦ಕರನಿಗೆ.ದಿವಾಕರಭಾವ ತೋಟದಿ೦ದ ಆಗ ತಾನೇ ಬ೦ದವನು..ಬ೦ದವರಿಗೆ ಬ೦ದ ವಿಷಯ ಕೇಳಿ ತಿಳಿದು ಚಹಾ ಕೊಟ್ಟು ಕಳುಹಿಸಿದ.

ಶ೦ಕರನ ಮನೆಯಲ್ಲೊ೦ದು ಹಳೆಯ ಕ್ಯಾಮೆರಾವೊ೦ದಿತ್ತು…ಅವನಕ್ಕ೦ದಿರೋ ಕಾಲೇಜಿಗೆ ಹೋಗುವವರು ದಿನಾಲೂ ಬಗೆಬಗೆಯ ಭ೦ಗಿಯಲ್ಲಿ ಫೋಟೋ ತೆಗೆಯುತ್ತಿದ್ದರು..ಇತ್ತೀಚೆಗೆ ಮೋಟರೊಲಾ ಮೊಬೈಲ್ ತೆಗೆದುಕೊ೦ಡಮೇಲೆಇದನ್ನೆಲ್ಲ ಬಿಟ್ಟುಬಿಟ್ಟಿದ್ದರು..ಹಾಗಾಗಿ ಶ೦ಕರ ಅದನ್ನು ತೆಗೆದುಕೊ೦ಡು ಫೋಟೋ ತೆಗೆಯಲು ಪ್ರಾರ೦ಭಿಸಿದ. ಅವನ ಮನದಲ್ಲಿ ಹೆಗ್ಗುರಿಯಿತ್ತು. ಹಾಗಾಗಿ ದಿನವಿಡಿ ಕಾದು ಪಕ್ಷಿಗಳ,ಎಮ್ಮೆ ದನಗಳ ಫೋಟೋ ತೆಗೆಯಲು ಪ್ರಾರ೦ಭಿಸಿದ. ಮೊದಮೊದಲು ದಿವಾಕರಭಾವ ಹೇಳುತ್ತಿದ್ದರು. ಕೆಲಸಕೆ ಬಾರದ ಕೆಲಸ ಯಾಕೆ ಮಾಡುತ್ತೀಯಾ.. ಸರಿಯಾಗಿ ನೆಟ್ಟಗೆ ನಿ೦ತುಕೊಳ್ಳುವುದು ಕಷ್ಟ.. ಸುಮ್ಮನೆ ಕುಳಿತು ಮನೆಯಲ್ಲಿ ದೇವರಪೂಜೆ ಮಾಡೆ೦ದರು.. ಶ೦ಕರಗ್ಯಾಕೋ ಸಿಟ್ಟು ಬ೦ದು ಚೀರಿದ… ದೇವರೇ ನನಗೆ ಹೀಗೆ ಮಾಡಿದ್ದು..ನನ್ನನ್ನು ಎಲ್ಲರ ತರಹವೇ ಮಾಡಲು ಬರುತ್ತಿರಲಿಲ್ಲವಾ?ಎ೦ದು… ಇದನ್ನು ಕೇಳಿದ ರಾಧಕ್ಕನಿಗೆ ಕರುಳು ಹಿ೦ಡಿದ೦ತಾಗಿ ಹೇಳಿದರು.. ಶ೦ಕರ ಅವನಿಗನಿಸಿದ್ದು ಮಾಡಲಿ..ಅವನ ಮನ ನೋಯಿಸಬೇಡಿ ಎ೦ದು ದಿವಾಕರ ಭಾವನಿಗೆ.

ಈ ಮಧ್ಯೆ ಸಿದ್ದಾಪರದಲ್ಲಿ ಯಾರೋ ನೀರಜ್ ಎನ್ನುವವರು ಪೂರ್ವಜನ್ಮಗಳ ಬಗ್ಗೆ ಹೇಳುವವರು ಬ೦ದಿದ್ದಾರೆ೦ದು ದಿವಾಕರ ಭಾವನಿಗೆ ಪಕ್ಕದಮನೆಯ ಚ೦ದ್ರಣ್ಣನಿ೦ದ ತಿಳಿಯಿತು.ತಹಶೀಲ್ದಾರರು ಅದನ್ನು ಮಾಡಿಸಿಕೊ೦ಡು ಪೂರ್ವಜನ್ಮಗಳ ಬಗ್ಗೆ ತಿಳಿದುಕೊ೦ಡ ಮೇಲೆ ದುಃಸ್ವಪ್ನಗಳು ಬರುವುದಿಲ್ಲವೆ೦ದು ಹೇಳಿದ್ದರ೦ತೆ..ಹಾಗಾಗಿ ಒಳ್ಳೆಯ ಅಭಿಪ್ರಾಯ ಸಿಕ್ಕಿತ್ತು ಅದರ ಬಗೆಗೆ.  ಎಲ್ಲವೂ ಸರಿ ಇರುವಾಗ ಈ ತರಹದ ಯೋಚನೆಗಳು ಬರುವುದು ಕಡಿಮೆ.ಆದರೆ ಈ ತರಹವೆಲ್ಲಾ ವಿಚಿತ್ರವಾಗಿ ಹುಟ್ಟಿದರೆ ಚಿ೦ತೆ ಇರುವುದು ಸಹಜ. ಹಾಗಾಗಿ ಶ೦ಕರನ ಪೂರ್ವಜನ್ಮಗಳ ತಿಳಿಯಲು ರಾಧಕ್ಕನೊಡನೆ ಸಮಾಲೋಚಿಸಿ ಕರೆದುಕೊ೦ಡು ಹೋಗಲು ನಿರ್ಧರಿಸಿದ. ಮೊದಲು ಶ೦ಕರ ರ೦ಪ ಮಾಡಿದನಾದರೂ ಆ ಮೇಲೆ ಅಲ್ಲಿ ಸನಿಹದಲ್ಲಿ ಛಾಯಾಗ್ರಹಣ ಮಾಡಲು ಒಳ್ಳೆಯ ಸ್ಥಳವಿದೆಯೆ೦ದೂ ಅಲ್ಲಿಗೆ ಕರೆದುಕೊ೦ಡು ಹೋಗುವುದಾಗಿ ಹೇಳಿದಮೇಲೆ ಒಪ್ಪಿಕೊ೦ಡ.

ನೀರಜ್ ಅವರು ಶ೦ಕರನ ಹಿಪ್ನೋಟೈಸ್(ಸಮ್ಮೋಹಿನಿ)ಗೊಳಿಸಿ ಅವನ ಪೂರ್ವಜನ್ಮಕ್ಕೆ ಕರೆದುಕೊ೦ಡು ಹೋದರು. ಅವನು ಹಿ೦ದಿನ ಜನ್ಮದಲ್ಲಿ ಉಕ್ರೇನಿನಲ್ಲಿ ಹುಟ್ಟಿ., ಅಲ್ಲಿ ಅವನ ಗೆಳೆಯನನ್ನೇ ಕೈಯೆಲ್ಲಾ ನುಗ್ಗುಗೊಳಿಸಿ ಅರ್ಧ೦ಬರ್ಧ ಕೊ೦ದು ಎಸೆದಿದ್ದ..ಹೀಗಾಗಿ ಈ ಜನ್ಮದಲ್ಲಿ ಹೀಗಾಗಿ ಹುಟ್ಟಿರುವನೆ೦ದರು. ಅದಕ್ಕೂ ಹಿ೦ದಿನ ಜನ್ಮದಲ್ಲಿ ಅವನು ಲಾಹೋರಿನಲ್ಲಿ ಪತ್ರಿಕೆಯೊ೦ದರ ಛಾಯಾಗ್ರಾಹಕನಾಗಿದ್ದ.ಆವಾಗ ಸ್ವಾತ೦ತ್ರ್ಯದ ದ೦ಗೆ ನಡೆಯುತ್ತಿತ್ತು.. ಆ ದ೦ಗೆಯಲ್ಲಿ ಮೃತಪಟ್ಟ .. ಹಾಗಾಗಿ ಅವೆರಡೂ ಸೇರಿಸಿ ಈ ಜನ್ಮದಲ್ಲಿ ಹೀಗಾಗಿ ಹುಟ್ಟಿರುವನೆ೦ದು ತಿಳಿಯಿತು.ಹಾಗೆಯೇ ಹಿ೦ದಿನ ಜನ್ಮದಲ್ಲಿ ದಿವಾಕರಭಾವ ರಾಧಕ್ಕ ತ೦ದೆ ತಾಯಿ ಆಗಿರಲಿಲ್ಲ ನೆರೆಮನೆಯವರಾಗಿದ್ದರು.. ಲಾಹೋರಿನಲ್ಲಿ.ಅವರಿಗೆ ಮಕ್ಕಳೇ ಇರಲಿಲ್ಲ. ಅವನ ಕ೦ಡರೆ ಅತೀವ ಪ್ರೀತಿಯಿತ್ತು..ಹಾಗಾಗಿ ಅವರಿಗೆ ಮಗನಾಗಿ ಹುಟ್ಟಿರುವನೆ೦ದು ಹೇಳಿದರು.ಅದಕ್ಕೂ ಮೊದಲಿನ ಜನ್ಮದಲ್ಲಿ ಉಕ್ರೇನಿನಲ್ಲಿ ಅವನ ತ೦ದೆ ತಾಯಿಗಳೇ ಆಗಿದ್ದರೆ೦ದೂ..  ಅದಕ್ಕೇ ಈಗಲೂ ಆತ್ಮ ಹುಡುಕಿಕೊ೦ಡು ಬ೦ದು ಶ೦ಕರನಾಗಿ ಜನ್ಮತಾಳಿದೆಯೆ೦ದೂ ಇನ್ನೂ ನೂರಾರು ಜನ್ಮಗಳಿರುವುದೆ೦ದೂ ತಿಳಿಸಿದರು. ಅ೦ತು ಶ೦ಕರ ದೇವರಲ್ಲವೆ೦ದಾಯಿತು. ದಿವಾಕರಭಾವ ರಾಧಕ್ಕ ಅವರಿಗೆ ಅವರ ಪ್ರಾರಬ್ಧ ತಿಳಿದ ಹಾಗಾಯಿತು. ಅಷ್ಟರಲ್ಲಿ ಶ೦ಕರನಿಗೆ ಎಚ್ಚರವಾಯಿತು.ಛಾಯಾಗ್ರಹಣಕ್ಕೆ ಕರೆದುಕೊ೦ಡು ಹೋಗಿ ಎ೦ದು ನೆನಪಿಸಿದ.ಅಲ್ಲೆ ಹತ್ತಿರದಲ್ಲಿದ್ದ ತೊರೆಯ ಬಳಿ ಕರೆದುಕೊ೦ಡು ಹೋದರು.

ಯಾವುದನ್ನೂ ತಲೆಗೆ ಹಾಕಿಕೊಳ್ಳದೆ ಶ೦ಕರ ಅವನ ಛಾಯಾಗ್ರಹಣವನ್ನು ಮು೦ದುವರೆಸಿದ..ದಿನವಿಡಿ ಕಾದು ಪಕ್ಷಿಗಳು ಸೂರ್ಯೋದಯ,ಸೂರ್ಯಾಸ್ತ ಪ್ರಕೃತಿಯ ರಮಣೀಯ ದೃಶ್ಯಗಳ ತೆಗೆಯತೊಡಗಿದ… ಪ್ರಜ್ಞಕ್ಕ ಶ೦ಕರನ ಛಾಯಾಗ್ರಹಣ ನೋಡಿ ಕೆಲವನ್ನು ಪತ್ರಿಕೆಗಳಿಗೆ. ಸ್ಪರ್ಧೆಗಳಿಗೆ ಕಳುಹಿಸಿದಳು.. ಕೆಲವು ಪ್ರಶಸ್ತಿ ಗಳಿಸಿದವು, ಕೆಲವು ಪತ್ರಿಕೆಗಳಲ್ಲಿ ಪ್ರಕಾಶಿತವಾದವು…ಈಗ ಶ೦ಕರ ಹೆಸರುಗಳಿಸ ತೊಡಗಿದ್ದ..ಅವನಿಗೆ ಒಂದು ಒಳ್ಳೆಯ ಕ್ಯಾಮೆರಾದ ಅವಶ್ಯಕತೆಯಿತ್ತು…ಆದರೆ ಲಕ್ಷಗಟ್ಟಲೆ ಹಣಬೇಕಿತ್ತು..ಆದರೀಗ ದಿವಾಕರಭಾವ ಹಿ೦ಜರಿಯಲಿಲ್ಲ. .ಸೀದಾ ಸಿ೦ಗಾಪುರದಲ್ಲಿದ್ದ ಅವರ ದೂರದ ಸ೦ಬ೦ಧಿಯೊಬ್ಬರು ಊರಿಗೆ ಬರುವವರಿದ್ದರು., ಅವರಿಗೆ ಕರೆ ಮಾಡಿ ನಿಕೋನ್ ಡಿಎಸ್ಎಲ್ಆರ್ ಕ್ಯಾಮೆರಾ ತರಲು ಹೇಳಿದರು…. ಹಣವನ್ನೂ ಹೊ೦ದಿಸಿಟ್ಟರು.(ಬ್ಯಾ೦ಕಿನಲ್ಲಿ ಕೂಡಿಟ್ಟ ಹಣ ತೆಗೆದು ತ೦ದರು)

ಹೊಸ ಕ್ಯಾಮರಾದಿ೦ದ ಅದ್ಭುತ ಚಿತ್ರಗಳು ಹೊರಹೊಮ್ಮಿದವು..ದೇಶ ವಿದೇಶಗಳಲ್ಲಿ ಶ೦ಕರನ ಛಾಯಾಗ್ರಹಿಸಿದ ಚಿತ್ರಗಳು ಪ್ರದರ್ಶಿತಗೊ೦ಡವು.ಜನ ಮೆಚ್ಚುಗೆ ಪಡೆದವು…ಮೊದಮೊದಲು ಶ೦ಕರನಿಗೆ ಆಹ್ವಾನ ಕಳುಹಿಸಿದಾಗ ದಿವಾಕರಭಾವ ಮಗನ ಕರೆದು ಕೊ೦ಡು ಹೋಗಲು ಹಿ೦ದೇಟು ಹಾಕುತ್ತಿದ್ದರು..ಮಗನಿಗೆ ಬೇರೆಯವರೇನಾದರು ನೋವು ಮಾಡಬಹುದೆ೦ದು… ಕ್ರಮೇಣ ಅವನು ಸದಾ ಸಮಾಧಾನ ಚಿತ್ತದಲ್ಲಿರುವುದನ್ನು ನೋಡಿ ಅವನು ಎಲ್ಲೆಡೆ ಹೋಗುವುದಕ್ಕೆ ಅನುಮತಿ ನೀಡಿದರು..ಈ ಮಧ್ಯೆ ಶ೦ಕರನೂ ಅಕ್ಕ೦ದಿರಿ೦ದ ಇ೦ಗ್ಲೀಷ್ ಹಿ೦ದಿ ಮಾತಾಡುವಷ್ಟು.. ಅಲ್ಪ ಸ್ವಲ್ಪ ಓದುವಷ್ಟು ಕಲಿತ. ಅವನ ಸ೦ದರ್ಶನಗಳು ದೂರದರ್ಶನದಲ್ಲಿ.. ಯುಟ್ಯೂಬ್ನಲ್ಲಿ ಪತ್ರಿಕೆಗಳಲ್ಲೆಲ್ಲ ಪ್ರಕಟವಾದವು.ಈಗ ಕ೦ಡವರೆಲ್ಲರೂ ಹೊಗಳುವವರೇ… ಎಲ್ಲರೂ ಪರಿಚಯದವರೆ೦ದು ಹೇಳಿಕೊಳ್ಳುವವರೇ.

ಶ೦ಕರ ಹಾಗೂ ಮನೆಯವರೆಲ್ಲ.. ಜನರ ಈ ಬದಲಾವಣೆಗೆ ಹೆಚ್ಚು ಗಮನಕೊಡಲಿಲ್ಲ…. ಶ೦ಕರನಿಗೆ ಕೇನ್ಸ ಛಾಯಾಗ್ರಹಣ ಪ್ರದರ್ಶನದಲ್ಲಿ ಅವನ ಚಿತ್ರ ಪ್ರದರ್ಶಿತವಾಗುವುದೆ೦ದೂ ಕುಟು೦ಬ ಸಹಿತ ಬರಬೇಕೆ೦ದೂ ಆಹ್ವಾನ ಬ೦ದಿತು…ಪಾಸ್ಪೋರ್ಟ ಎಲ್ಲಾ ಹದಿನೈದು ದಿನಗಳಲ್ಲಿ ಸಿದ್ಧ ಪಡಿಸಿಕೊ೦ ಭಾರತೀಯ ವಿದೇಶಾ೦ಗಇಲಾಖೆಯವರ ಜೊತೆಗೂಡಿ ಕೇನ್ಸಗೆ ಪ್ರಯಾಣ ಬೆಳೆಸಿದರು. ಅಲ್ಲಿ ಪ್ರಕೃತಿ ಹಾಗೂ ಪಕ್ಷಿಗಳ ಜಗತ್ಪ್ರಸಿದ್ಧಛಾಯಾಗ್ರಾಹಕ ಮೂಸೆ ಪೀಟರ್ಸಶ೦ಕರನ ಪ್ರತಿಭೆಯ ಪ್ರಶ೦ಸಿಸಿದರು.

ಅವನಿಗೆ ಅಲಾಸ್ಕಾಕ್ಕೆ ಬರುವ೦ತೆ ಆಹ್ವಾನವಿತ್ತರು..ಅಲ್ಲಿ ಬ೦ದವರಾರೂ ಶ೦ಕರನ ರೂಪಕ್ಕೆ ಮಹತ್ವವೀಯಲೇ ಇಲ್ಲ ಬದಲಾಗಿ ಅವನ ಕೌಶಲ್ಯವ ಹಾಡಿ ಹೊಗಳಿದರು..ಬದಲಾಗಿ ಫ್ರೆ೦ಚ್ ಸರ್ಕಾರ ಅಲ್ಲಿಯ ಪ್ರಜೆಯ ದರ್ಜೆ ಕೊಟ್ಟು ಸಕಲ ಸೌಲಭ್ಯ ಒದಗಿಸುವುದೆ೦ದಿತು.ಆದರೆ ಅದಕ್ಕೆಶ೦ಕರ ಸುತಾರಾ೦ ಒಪ್ಪಲಿಲ್ಲ. ತನ್ನ ದೇಶ ಊರು ತೊರೆಯಲು ಒಪ್ಪಲಿಲ್ಲ. ಕೆಲವು ದಿನಗಳ ನ೦ತರ ಮನೆಗೆ ಮರಳಿ ಬ೦ದ ಶ೦ಕರ..ಪರಿವಾರದೊಡಗೂಡಿ…. ಈಗ ಎಲ್ಲೆಡೆಯಿ೦ದ ಪ್ರಶ೦ಸೆಗಳ ಸುರಿಮಳೆ.. ಪ್ರಶಸ್ತಿಗಳು ಅರಸಿ ಬ೦ದವು..ಗಣ್ಯರೆಲ್ಲರು ದಿವಾಕರ ಭಾವನ ಮನೆಗೆ ಬರತೊಡಗಿದರು. ಆದರೆ ಶ೦ಕರ ಮೊದಲಿನ೦ತೆ ಛಾಯಾಗ್ರಹಣ ಮಾಡತೊಡಗಿದ.

ಅ೦ದು ಮೂಸೆ ಪೀಟರ್ ಅಲಾಸ್ಕಾದಿ೦ದ ಕರೆ ಮಾಡಿದ್ದರು.ಶಾ೦ಘೈಯಲ್ಲಿ ಕಾಡುಪ್ರಾಣಿಗಳ ಛಾಯಾಗ್ರಹಣ ಮಾಡುವುದೆ೦ದೂ ಅದಕ್ಕೆ ಶ೦ಕರ ಸಹಾಯಕನಾಗಿ ಬರಬೇಕೆ೦ದೂ ಕೇಳಿಕೊ೦ಡರು. ಅದಕ್ಕೆ ಶ೦ಕರನ ತ೦ದೆ ತಾಯಿಗಳು ಒಪ್ಪಿದರು.ಅಕ್ಕ೦ದಿರು ಕುಣಿದಾಡಿದರು. ಎಲ್ಲಾ ಸಿದ್ಧತೆಗಳೂ ಆದವು ಹೊರಡುವುದಕ್ಕೆ..ಇದೇ ಮೊದಲಬಾರಿಗೆ ಒಬ್ಬನೇ ಹೊರಟಿದ್ದ.. ಅಲ್ಲಿ ಸಸ್ಯಾಹಾರ ಸಿಗುವುದಿಲ್ಲವೆ೦ದೂ ಬಗೆಬಗೆಯ ತಿ೦ಡಿ ಸಿದ್ಧಗೊಳಿಸಿದರು ರಾಧಕ್ಕ…

ಹೊರಡುವ ದಿನವೂ ಬ೦ತು. ಬೆ೦ಗಳೂರಿನ ವಿಮಾನ ನಿಲ್ದಾಣದಲ್ಲಿ ಮೂಸೆ ಪೀಟರ ಭೆಟ್ಟಿಯಾದರು..ಈರ್ವರೂ ಬೀಳ್ಕೊ೦ಡು ಹೊರಟರು ಮಲೇಶಿಯನ್ ವಿಮಾನ ೩೭೦ದಲ್ಲಿ ಹೊರಟರು..ವಿಮಾನ ರಾಡಾರ್ನಿ೦ದ ಮರೆಯಾಯಿತೆ೦ದೂ ನಾಪತ್ತೆಯಾಗಿರುವದೆ೦ದೂ ಸುದ್ದಿಬ೦ತು..ದಿವಾಕರ ಭಾವ ರಾಧಕ್ಕ ಪ್ರಜ್ಞಾ ಪ್ರಣೀತಾ ದುಃಖದ ಮಡುವಿನಲ್ಲಿದ್ದರು..ಹೇಗಾದರು ಒಳ್ಳೆಯ ಸುದ್ದಿ ಬರಲೆ೦ದು ದೇವರಲ್ಲಿ ಮೊರೆ ಇಡುತ್ತಿದ್ದರು..ದೇಶಭರದಲ್ಲಿ ಪವಾಡವಾಗಿ ಸುರಕ್ಷಿತವಾಗಿ ಶ೦ಕರ ಹಿ೦ದಿರುಗುವುದಕ್ಕಾಗಿ ಪ್ರಾರ್ಥಿಸುತ್ತಿದ್ದರು.

ತಿ೦ಗಳುಗಳರುಳಿದವು..ಯಾವುದೇ ಸುಳಿವಿರಲಿಲ್ಲ..ಆದರೆ ಅದೊ೦ದು ದಿನ ವಿಮಾನ ದ ಕಪ್ಪು ಪೆಟ್ಟಿಗೆ ಸಿಕ್ಕಿತು..ವಿಮಾನದಲ್ಲಿದ್ದ ಎಲ್ಲರೂ ಮೃತರಾದರಾಗಿರುವರೆ೦ಬ ಸುದ್ದಿಬ೦ತು..ಮೆಸೇಜ್ ಕೂಡಾ ಬ೦ತು ಮಲೇಶ್ಯಾ ವಿಮಾನ ಸ೦ಸ್ಥೆ ಹಾಗೂ ಸರಕಾರದಿ೦ದ. ಅರಳುತ್ತಾ ಇದ್ದ ಶ೦ಕರನ ಚೇತನ ಈಜಗತ್ತಿನಿ೦ದ ಕಣ್ಮರೆಯಾಯಿತು.ಜನರ ಮನದಿ೦ದಲ್ಲ.

ವಿಕಲಾ೦ಗತೆಯಾಗಲಿ ವಿಚಿತ್ರ ರೂಪವಿರಲಿ ಅಭಿಶಾಪವಲ್ಲ..ಆತ್ಮಸ್ಥೈರ್ಯವೊ೦ದಿದ್ದರೆ ಏನನ್ನಾದರೂ ಸಾಧಿಸಬಹುದೆ೦ದು ತೋರಿಸಿಕೊಟ್ಟ. ಯಾವ ಮೋಹನ ಮುರಳಿ ಕರೆಯಿತೋ ದೂರ ತೀರದಿ ನಿನ್ನನು ಎ೦ಬ ಹಾಡು ರೇಡಿಯೋದಲ್ಲಿ ಅ೦ದು ಪ್ರಸಾರವಾಗುತ್ತಿತ್ತು.ಅದು ಅವನ ಅತ್ಯ೦ತ ಪ್ರೀತಿಯ ಹಾಡು.ಹೌದು …ಶ೦ಕರನ ಅದ್ಯಾವುದೋ ದಿವ್ಯ ಮೋಹನ ವೀಣೆ ಪರಮಾತ್ಮನೆಡೆಯ ದೂರ ತೀರಕ್ಕೆ ಕರೆದೊಯ್ದಿತ್ತು.

—ವಾಯ್ಕೆ–
ಯಶೋದಾ ಗಣಪತಿ ಭಟ್ಟ ನೀರಗಾನು(ದುಬೈ)

Posted in ಕಥಾಸರಣಿ, ಗೀತ್ ಕಹಾನಿ | Tagged , , | Leave a comment

ಪ್ರಭುದ್ಧತೆಯೊಳಗೊಂದು ಬಾಲ್ಯ..

 

kids-jumping-off-dock-sunset_h
ಆಧುನಿಕ ಜೀವನ ಶೈಲಿ ಹಾಗು ಕೆಲವೊಂದು ಜೀವನದ ಅನಿವಾರ್ಯತೆ ನಮ್ಮೊಳಗೆ ನಮ್ಮನ್ನು ಮಾರಿಕೊಳ್ಳುವಂತೆ ಮಾಡುತ್ತಿದೆ.. ಇದು ಬಾಂಧವ್ಯ, ಪ್ರೀತಿ, ವಾತ್ಸಲ್ಯ, ಸಂಬಂಧ ಎಲ್ಲವನ್ನೂ ಕಳೆದುಕೊಳ್ಳುವಂತೆ ಮಾಡುತ್ತಿದೆ.. ಬಾಲ್ಯದಲ್ಲಿ ಹೇಗೊ ಇದ್ದ ನಾವು ಆ ಖುಷಿಯ, ಪ್ರೀತಿಯ, ಕಾಳಜಿಯ ಪ್ರಪಂಚದಿಂದ ದೂರಾಗುತ್ತಿದ್ದೇವೆ.. ಇದಕ್ಕೆಲ್ಲ ಕಾರಣ ಏನು? ದೊಡ್ಡವರಾದಾಕ್ಷಣ ಅದನ್ನೆಲ್ಲ ಕಳೆದುಕೊಳ್ಳಬೇಕೆ? ತಾಯಿಯ ಪ್ರೀತಿ,ತಂದೆಯ ವಾತ್ಸಲ್ಯದಿಂದಲೂ ದೂರಾಗಬೇಕೆ? ಬಾಲ್ಯದಲ್ಲಿದ್ದ ಖುಷಿಯನ್ನು ದೂರಾಗಿಸುತ್ತಿದೆ.. ಇಲ್ಲ.. ಇವನ್ನೆಲ್ಲ ಕಳೆದುಕೊಳ್ಳುವ ಮನಸ್ಸಿಲ್ಲ.. ಹಬ್ಬ ಹರಿದಿನ, ನೆಂಟರಿಷ್ಟರ ಬಾಂಧವ್ಯ, ಪ್ರೀತಿ, ಆಟ, ಪಾಠ ಎಲ್ಲವನ್ನೂ ನೆನೆಸಿಕೊಂಡರೇ ಇಷ್ಟು ಖುಷಿ ಇರುವಾಗ ಇನ್ನು ಮತ್ತೆ ಮತ್ತೆ ಅನುಭವಿಸಿದರೆ…???

ಗೋಲಿ, ಲಗೋರಿ, ಚಿನ್ನಿದಾಂಡು ಆಡುತ್ತಾ, ಬೆಟ್ಟ ಬೇಣಗಳನ್ನು ತಿರುಗಿತ್ತಾ, ಕುರುಚಲು ಹಣ್ಣುಗಳನ್ನು ತಿನ್ನುತ್ತಾ ಇದ್ದಿದ್ದರ ಖುಷಿಯೇ ಬೇರೆ.. ಮಳೆಗಾಲದಲ್ಲಿ ನೆನೆದು ಕ್ರಿಕೇಟ್ ಆಡುವ ಖುಷಿಯೇ ಬೇರೆ.. ಗದ್ದೆಯಲ್ಲಿ ಆಡುವ ಆಟ, ಅಲ್ಲೇ ಹೂಳುತ್ತಿದ್ದ ಆಳನ್ನು ಗೋಳೊಯ್ದುಕೊಂಡು ಅವನಲ್ಲಿ ಬೈಸಿಕೊಂಡು ಕೊನೆಗೆ ಅವನನ್ನು ಸಮಾಧಾನಿಸಿ, ತೇಲುವ ಬಂಡಿಯ ಮೇಲೆ ನಿಂತು ಮಜಾ ಅನುಭವಿಸಿ ಬಂದರೆ ಮಾತ್ರ ಸಮಾಧಾನ.. ಒದ್ದೆಯಾಗಿ ಬಂದಾಗ ಅಮ್ಮ ಬೈದು ಬಿಸಿ ಬಿಸಿ ನೀರಿನ ಸ್ನಾನ ಮಾಡಿಸಿ ತಲೆ ಒರೆಸಿದಾಗ ಅದೊಂದು ರೀತಿಯ ಸಮಾಧಾನ.. ಅಣ್ಣನೊಂದಿಗೆ ಜಗಳವಾಡಿ, ಅಣ್ಣನಿಗೆ ಹೊಡೆದು ಗೋಳೊಯ್ದುಕೊಳ್ಳುವುದು, ಅಣ್ಣ ಹೊಡೆತವನ್ನೂ ಸಹಿಸಿಕೊಂಡು ಅಮ್ಮನಲ್ಲಿ ‘ನೋಡೆ ಅಮ್ಮಾ..ತಮ್ಮ ಹೊಡೆತಾ’ ಎಂದು ಹೇಳುವಾಗ ಆತನ ಮುಗ್ದತನ ಇಷ್ಟವಾಗುತ್ತಿತ್ತು..

ಯಾರದೋ ಗದ್ದೆಯತುದಿಯಲ್ಲಿದ್ದ ಮಾವಿನ ಮರಕ್ಕೆ ಕಲ್ಲು ಹೊಡೆಯುತ್ತಿದ್ದರಲ್ಲಿರುತ್ತಿದ್ದ ಮಜವೇ ಬೇರೆ.. ಸಾಲದೆಂಬಂತೆ ಅವರದೇ ತೋಟದಲ್ಲಿದ್ದ ಮಾವಿನ ಕಾಯಿ ಕದ್ದು ತರುವಾಗ ಸಿಕ್ಕಿ ಬಿದ್ದು, ಅವರಿಂದ ತಪ್ಪಿಸಿಕೊಂಡು ಬಂದಾಗ ಯುದ್ದ ಗೆದ್ದ ಸಂಭ್ರಮ.. ಎಲ್ಲೋ ಊರಿನ ಮೇಲೆ ಮಾಡಿದ ತಪ್ಪು ಅಪ್ಪನಿಗೆ ತಿಳಿದು, ಅಪ್ಪ ಹೊಡೆದಾಗ ಮುನಿಸಿಕೊಂಡು, ರಾತ್ರಿಯೂಟಮಾಡದೇ ಮನೆಯಿಂದ ಹೊರಹೋಗಿ ಭಯದ ನಡುವೆಯೇ ಬೆಟ್ಟದ ಮೇಲೆ ಹೋಗಿ ಕುಳಿತುಕೊಂಡಿದ್ದು.. ಅನಂತರ ಅಪ್ಪಬಂದು ಪ್ರೀತಿಯಿಂದ ಸಮಾಧಾನ ಮಾಡಿ ಕರೆದುಕೊಂಡು ಹೋದಾಗಲೂ ಊಟಮಾಡದೇ ಮಲಗಿ, ಮಧ್ಯರಾತ್ರಿ ಹಸಿವಾದಾಗ ಅಮ್ಮ ರಾತ್ರಿಯನ್ನೂ ಲೆಕ್ಕಿಸದೇ ಕೊಡುತ್ತಿದ್ದ ಕೈತುತ್ತನ್ನು ಈಗಲೂ ಒಮ್ಮೆ ತಿನ್ನಬೇಕಿತ್ತು.. ಆ ನಿಸ್ವಾರ್ಥ ಪ್ರೀತಿ, ಮಮತೆಗೆ ಬೆಲೆ ಕಟ್ಟಲೂ ಸಾಧ್ಯವಿಲ್ಲ..

ಶಾಲೆಗೆ ಹೋಗಿ ಮನೆಗೆ ಬಂದಾಗ ಅಮ್ಮನನ್ನು ಕಾಣದೇ ಮನೆಯಿಡೀ ಹುಡುಕಿ, ಕೂಗಿ ಕೂಗಿ ಕರೆದಾಗಲೂ ಅಮ್ಮ ಕಾಣದಿದ್ದಾಗ ಮನದಲ್ಲೇ ದುಃಖ.. ಕೊನೆಗೆ ‘ಮಗನೇ ಇಲ್ಲೆ ಇದ್ನೋ’ ಎಂದು ಹಿತ್ತಲಿನಿಂದ ಅಮ್ಮನ ಸ್ವರ ಕೇಳಿದಾಗ ಹಿಡಿಯಲಾರದಷ್ಟು ಆನಂದ.. ಅಮ್ಮ ಮಾಡಿದ ತಿಂಡಿ ತಿಂದು, ಸಂಜೆಯ ಬಾಯಿಪಾಠ ಹೇಳಿ ಅಮ್ಮನ ಕೈತುತ್ತನ್ನು ತಿಂದು ಅಮ್ಮನ ಮಡಿಲಲ್ಲೆ ನಿದ್ರೆ ಹೋದರೆ ಬೆಳಗಾಗುತ್ತಿದ್ದಿದ್ದರ ಪರಿವೆಯೇ ಇರುತ್ತಿರಲಿಲ್ಲ..

ಹಬ್ಬ ಹರಿದಿನಗಳಲ್ಲಿ ಮನೆಯಲ್ಲಿ ಸೇರುತ್ತಿದ್ದ ಜನ, ಎಲ್ಲರೂ ಸೇರಿ ಮಾಡುತ್ತಿದ್ದ ಪೂಜೆ, ಮಕ್ಕಳ ಆಟ, ಹರಟೆ, ರಾತ್ರಿ ಎಲ್ಲರೂ ಸೇರಿ ಆಡುತ್ತಿದ್ದ ಇಸ್ಪೀಟಿನ ಗಮ್ಮತ್ತು ಎಲ್ಲವೂ ಇರುತ್ತಿತ್ತು.. ಇದು ನಮ್ಮೊಳಗಿನ ಬಾಂಧವ್ಯ ಪ್ರೀತಿ ಹೆಚ್ಚಿಸುತ್ತಿದ್ದವು.. ಆದರೆ ಇವುಗಳನ್ನೆಲ್ಲ ಎಲ್ಲಿ ಹುಡುಕುವುದು?? ಇಂತಹ ಸಂತಸದ ಕ್ಷಣಗಳನ್ನು ನಮ್ಮ ಮಕ್ಕಳು ಅನುಭವಿಸಿದ್ದಾರೆಯೇ?

ನಾವೆಲ್ಲ ತಂದೆತಾಯಿಯರ ಪ್ರೀತಿ ವಾತ್ಸಲ್ಯ, ಬಂಧುಗಳ ಸಹಕಾರಗಳಿಲ್ಲದೇ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತಿತ್ತೆ? ದೊಡ್ಡವರಾದಾಕ್ಷಣ ಚಿಕ್ಕಂದಿನಲ್ಲಿ ಅನುಭವಿಸಿದ ಪ್ರೀತಿ ವಾತ್ಸಲ್ಯದಿಂದ ದೂರಾಗಬೇಕೆ? ನಮ್ಮ ಆಪೀಸು, ಕೆಲಸದ ಮಧ್ಯ ನಮ್ಮ ಮಕ್ಕಳಿಗೂ ಇಂತಹ ಖುಷಿಯ ಕ್ಷಣಗಳಿಂದ ದೂರವಾಗಿಸಬೇಕೆ? ನಾವು ಆಡಿದ ಆಟ ಪಾಠ ಸಂಸ್ಕೃತಿ, ಸಂಸ್ಕಾರದ ಅರಿವನ್ನು ನಮ್ಮ ಮಕ್ಕಳಿಗೂ ನೀಡಬಾರದೇ? ಅಥವಾ ಆಧುನೀಕತೆಯಲ್ಲಿ ಸಂಭಂಧಗಳೆಲ್ಲವೂ ನಿಷಿದ್ಧವೇ? ಈಗಿನ ಮಕ್ಕಳಿಗೆ ಸಂಬಂಧ, ಸಂಸ್ಕಾರಗಳ ಅರಿವೇ ಇಲ್ಲವಾಗಿದೆ..

ಹಾಗಂತ ದೊಡ್ಡವರಾದ ಮೇಲೆ ಆಟವಾಡಬೇಕೆಂದು ಹೇಳುತ್ತಿಲ್ಲ.. ಕನಿಷ್ಠ ಪಕ್ಷ ಹಬ್ಬಹರಿದಿನಗಳಲ್ಲಾದರೂ ಎಲ್ಲರೂ ಬೆರೆಯಬೇಕು.. ನಾವು ಪಡೆದ ಸಂಸ್ಕಾರದ ಅರಿವನ್ನು ಮಕ್ಕಳಿಗೂ ತಿಳಿಯುವಂತೆ ಮಾಡಬೇಕು.. ಸಂಬಂಧಗಳ ಅರಿವು ಮೂಡಿಸಬೇಕು.. ನಾವು ಚಿಕ್ಕಂದಿನಲ್ಲಿ ಪ್ರೀತಿಯಿಂದ ಬೆಳೆಸಿದ ತಂದೆ ತಾಯಿಯರನ್ನು ಸಂತೋಷದಿಂದ ಇಡಲು ಸಾಧ್ಯವಾಗದಿದ್ದರೆ ಎಂತಹ ಸಾಧನೆ ಮಾಡಿಯಾದರೂ ಏನು ಪ್ರಯೋಜನ..?? ಸಂತೋಷದ ಮೂಲವನ್ನು ಬೇರೆಲ್ಲೂ ಹುಡುಕಿಕೊಂಡು ಹೋಗಬೇಕಿಲ್ಲ.. ನಾವೂ ಅವರೊಂದಿಗೆ ಬೆರೆತಾಗ ತಂದೆತಾಯಿಯರಿಗೂ ಸಂತೋಷ.. ಮಕ್ಕಳಲ್ಲಿಯೂ ಸಂಸ್ಕೃತಿ ಸಂಸ್ಕಾರಗಳ ಅರಿವು ಮೂಡುತ್ತದೆ.. ಬಾಲ್ಯದ ಖುಷಿ,ಸಂತೋಷ,ಪ್ರೀತಿ ವಾತ್ಸಲ್ಯಗಳೂ ಸಿಗುತ್ತದೆ..

ಒಟ್ಟಿನಲ್ಲಿ “ಪ್ರಭುದ್ಧತೆಯೊಳಗೊಂದು ಬಾಲ್ಯವನ್ನು ಕಂಡುಕೊಳ್ಳಬೇಕು” ಎಂಬುದು ನನ್ನ ಅನಿಸಿಕೆ… ನೀವೇನ್ಹೇಳ್ತೀರಾ…?????

ರಾಮಚಂದ್ರ ಹೆಗಡೆ

Posted in ವಿಶೇಷ ಬರಹ | Tagged , , , | Leave a comment

ಎರಡು ಮಿನಿ ಕಥೆಗಳು

ಜಾಣ ಜಾಣೆಯರ ಜಗಲಿ ಫೇಸ್ ಬುಕ್ ಬಳಗದಲ್ಲಿ ಆಯೋಜಿಸಿದ ಗೀತ್ ಕಹಾನಿ ಕಥಾಸ್ಪರ್ಧೆಯಲ್ಲಿ ಯಾವ ಮೋಹನ ಮುರಳಿ ಕರೆಯಿತೊ ಎಂಬ ಭಾವಗೀತೆಯ ಸಾರಾಂಶವನ್ನಾಧರಿಸಿ ಬರೆದ ಕಥೆಗಳಲ್ಲಿ ಮೆಚ್ಚುಗೆ ಪಡೆದ ಎರಡು ಕಥೆಗಳು..


ಭಾವನೆ ಇಲ್ಲದ ಜೀವನ

ಸೂರ್ಯನ ಕಿರಣಗಳು ಕೆನ್ನೆ ಮೇಲೆ ಬಿದ್ದರೂ ಅದರ ಅರಿವೇ ಇಲ್ಲದಂತೇ ಮುಂಜಾವಿನಲಿ ಆವರಿಸಿದ ನಿದ್ದೆಗೆ ಮಂಚದ ಮೂಲೆಯಲ್ಲಿ ಮುದುಡಿ ಮಲಗಿದ ಆ ಸುಮಧುರ ಕಂಠದ ಚಲುವೆಯೇ ಈ ಸಮನ್ವಿತ. ಮಗಳ ದಿನಚರಿಗೂ ತನಗೂ ಯಾವುದೇ ಸಂಬಂಧವಿಲ್ಲದಂತೆ ನೋವಿನ ಗೆರೆಗಳನ್ನು ಹೊತ್ತಿರುವ ಮುಖ ಅವಳದು. ದೂರದಿಂದ ಕೇಳಿ ಬರುವ ಸಂಗೀತದ ಸ್ವರಕ್ಕೇ ಎಚ್ಚರವಾಗಿ ಎದ್ದು ಸಂತೋಷದಿ ಮುಖವರಳಿ ಹಾಡಲು ಬಾಯಿ ತೆರೆದಾಗ ಜೀವ ಹಿಂಡುವ ನೋವು ಅವಳ ಸಂತೋಷಕ್ಕೆ ತಡೆ ಹಿಡಿಯುತ್ತಿತ್ತು. ಆಗ ಅವಳ ಮನ ಚೀರಿ ಹೇಳುತ್ತಿತ್ತು ನೀನೊಬ್ಬ ಕ್ಯಾನ್ಸರ್ ರೋಗಿ ಎಂದು…

ಕಳೆದು ಹೋದ ನೆನಪುಗಳು ಕೆನ್ನೆಯಮೇಲೆ ಕಣ್ಣೀರಾಗಿ ಜಾರಿಬಂದು ಹಳೇಯ ನೆನಪಿನಂಗಳಕ್ಕೇ ಕರೆದೊಯ್ದಿತ್ತು.

ತನ್ನ ಎಳೇ ಪ್ರಾಯಗಳಿಂದಲೂ ಅಜ್ಜನ ಸಂಗೀತ ಪಾಠದಿಂದ ಸ್ವರ ಸ್ಥಾನ ಹಿಡಿತ ಅವಳಲ್ಲಿತ್ತು. ಬೆಳೆಯುತ್ತಾ ಬಂದಂತೆ ಸಂಗೀತವೇ ಉಸಿರಾಗಿ.. ಬೇರೆ ವಿಚಾರಧಾರೆಗಳೆಲ್ಲ ಅಷ್ಟೊಂದು ಮನ ಸೆಳೆಯಲಿಲ್ಲ. ಪದವಿ ಮುಗಿಯುವ ಹೊತ್ತಿಗೆ ನಂಬಿ ಬಂದ ಸಂಗೀತವೇ ಕೈ ಹಿಡಿದು ದೇಶ ವಿದೇಶಗಳಲ್ಲೆಲ್ಲ ಮಿಂಚತೊಡಗಿದಳು. ತುಂಬಾ ಮದುವೆಯ ಪ್ರಸ್ತಾಪಗಳೆಲ್ಲ ಬಂದರೂ ಅವುಗಳಿಗೆಲ್ಲ ತಲೆಕೊಡದೇ ಮನೆಯವರೆಲ್ಲ ಮೆಚ್ಚಿ ತೋರಿಸಿದ ಹುಡುಗನೊಂದಿಗೆ ಸಪ್ತಪದಿ ತುಳಿದು ದೂರದ ಊರಿನಲ್ಲಿ ಗಂಡನ ಜೊತೆ ಸಂಸಾರವನ್ನು ಹೂಡಿದಳು. ಗಂಡನ ಪ್ರೀತಿಗೆ ಮರುಗೀ ಗಂಡನ ಒತ್ತಾಯದಿಂದ ಹುಟ್ಟಿ ಬೆಳೆದುಬಂದ ತವರು ಮನೆಯನ್ನು ದೂರಮಾಡಿದ್ದಳು.ಸಂಸಾರದ ಭಾರದ ಜೊತೆಗೆ ಸಂಗೀತದೊಟ್ಟಿಗಿನ ಪಯಣ ಸಾಗುತಲಿತ್ತು ಒಟ್ಟಿಗೆ ತಾಯ್ತನದ ಕೊಂಡಿಯೊಂದು ಬೆಸೆಯುತಲಿತ್ತು.

ಹೀಗಿರುವಾಗ ಬಂದ ಒಂದು ಪೋನಿನ ಕರೆ ಅವಳ ಮನವನ್ನು ಅಲ್ಲೋಲಕಲ್ಲೋಲವಾಗಿಸಿತ್ತು. ಅದೇನೆಂದರೆ ಅವಳ ಪ್ರತಿಭೆಯನ್ನು ತನ್ನ ಗಂಡ ವಿದೇಶಿ ಕಂಪನಿಗೆ ಮಾರಿದ್ದಾನೆ ಅದರ ಹಣವನ್ನು ಈಗಲೇ ತೆಗೆದುಕೊಂಡಿದ್ದಾನೆಂದು ಒಲ್ಲದ ಮನಸ್ಸಿನಿಂದ ವಿದೇಶಕ್ಕೇ ಹೋದಳು.ಅಲ್ಲಿ ಮಗುವಿನ ಜವಾಬ್ಧಾರಿಯೊಟ್ಟಿಗೆ ಸಂಗೀತದ ಪಯಣ ಸಾಗಿತ್ತು.. ಕಾಲಚಕ್ರ ಉರುಳಿದಂತೇ ಗಂಡನಿಂದ ದೂರವಾಗಿದ್ದಳು. ಅಲ್ಲಿ ಹಿರಿಮೆ ಕೀರ್ತೀ ಎಲ್ಲವು ಬಂತು … ಹಾಗೊಮ್ಮೆ ಮಗಳ ಶಾಲೆಯ ಒಂದು ಸಮಾರಂಭದಲ್ಲಿ ಹಾಡಲು ಒತ್ತಾಯಿಸಿದಾಗ ಅವಳಿಷ್ಟದ ಯಾವ ಮೋಹನ ಮುರುಳಿ ಕರೇಯಿತೋ ದೂರ ತೀರಕೇ ಎಂದು ಹಾಡುತ್ತಲಿರುವಾಗ ಕುಸಿದು ಬಿದ್ದಿದ್ದಳು. ಯಾಕೇ ಎನಾಯ್ತೆಂದು ಆಸ್ಪತ್ರೆಗೆ ದಾಖಲಿಸಿದಾಗ ಅಲ್ಲೊಂದು ಆಘಾತದ ಸುದ್ದಿ ತಿಳಿದಿತ್ತು.. ಅದೇ ಗಂಟಲಿನ ಕ್ಯಾನ್ಸರ್ ….. ಶುರುವಿನ ಹಂತದಲ್ಲಿದೆ…. ಇನ್ನು ಮುಂದೆ ಯಾವತ್ತು ಹಾಡಬಾರದೆಂದು… ತನ್ನ ಜೀವನದ ಎರಡನೇ ಆಘಾತದ ಸುದ್ದಿ ಕೇಳಿ ಸಮನ್ವಿತ ಸಂಪೂರ್ಣ ಮಂಕಾಗಿ ತನ್ನ ಮಗಳನ್ನು ಯಾವುದೋ ಆಯಿಯ ಕೈಗಿತ್ತು. ತನ್ನ ಪಾಡಿಗೆ ಒಬ್ಬಳೇ ಕೊಣೆಯಲ್ಲಿರಲಾಂಬಿಸಿದಳು.

ಯಾವತ್ತೂ ಕೊಣೆ ಬಿಟ್ಟು ಹೊರ ಬರುತ್ತಲೇ ಇರಲಿಲ್ಲ. ತಿಂಗಳುಗಳೇ ಉರುಳಿದ ನಂತರ ತನ್ನ ತಾಯ್ನಾಡಿನಲ್ಲಿರುವವರಿಗೆಲ್ಲ ಹೇಗೋ ವಿಷಯ ತಿಳಿದು ಅವಳಿರುವಲ್ಲಿಗೆ ಓಡೋಡಿ ಬಂದರು. ಮನೆಗೆ ಬಂದ ಅತಿಥಿಗಳನ್ನು ಎಲ್ಲರು ಸ್ವಾಗತಿಸುವ ಹಾಗೇ ಇವಳು ಸಹ ಅವರನ್ನು ಸ್ವಾಗತಿಸಿದ್ದಳು…. ಮನೆಯವರ ಬರುವಿಕೆಯು ಆಕಸ್ಮಿಕವಾಗಿದ್ದರಿಂದ ಕಣ್ಣಂಚಲಿ ನೀರು ತುಂಬಿ ನವಿರಾಗಿ ನಕ್ಕು ಕಣ್ಣು ಮುಚ್ಚಿ ಬಾರದ ಲೋಕಕ್ಕೆ ಹೊರಟುಹೋದಳು. ಅಲ್ಲೇ ಇದ್ದ ಸಮನ್ವಿತಾಳ ಸಂಗೀತ ಪೆಟ್ಟಿಗಗೆ ಮಗಳ ಕೈ ತಾಕಿ ಹಾಡೊಂದು ಬಂದಿತ್ತು.. ಎಲ್ಲರ ದುಃಖದ ಮುಂದೆ ಸಮನ್ವಿತಾಳ ಇಷ್ಟದ ಹಾಡೊಂದು ಬರುತ್ತಲಿತ್ತು……..

ಯಾವ ಮೋಹನ ಮುರುಳಿ ಕರೇಯಿತೋ ದೂರ ತೀರಕೆ ನಿನ್ನನು..
ಯಾವ ಬೃಂದಾವನವು ಸೆಳೆಯಿತೋ ನಿನ್ನ ಮಣ್ಣಿನ ಕಣ್ಣನು….

-ಅಕ್ಷತಾ ಕೊಣಾಲೆ


ಯಾವ ಮೋಹನ ಮುರಳಿ ಕರೆಯಿತು…..

ತಾನು ತನ್ನತನ ಎಂಬ ಆಳ ಸಾಗರದೊಳಗೆ ಹೊಕ್ಕಿಯಾಗಿದೆ.., ದೂರ ತೀರದಲ್ಲಿ ಮುರಳಿಯ ನಾದ ಹಿತವೆನಿಸಿದರೂ ‘ತನ್ನ’ ಮಹಾಸಾಗರವನ್ನು ಬಿಟ್ಟು ಹೊರಬರಲಾಗುತ್ತಿಲ್ಲ ,. ಹೊರಬರಲಾಗುತ್ತಿಲ್ಲ ಎನ್ನುವುದಕ್ಕಿಂತ ಪ್ರಯತ್ನಿಸುತ್ತಿಲ್ಲ….!

ತನ್ನ ಮಹಾಸಾಗರ… ಅದರಲ್ಲಿ ತಾನು,ತನ್ನವರು, ಜೊತೆಗೆ ತನ್ನದೇ ಆದ ಗುರಿಗಳು,ಬಯಕೆಗಳು,ಬೆಟ್ಟದಷ್ಟು,ಕನಸುಗಳು ಅದೆಷ್ಟರ ಮಟ್ಟಿಗೆ ಈಡೇರುತ್ತದೋ,ನಿರೀಕ್ಷೆಗಳು ಎಷ್ಟರ ಮಟ್ಟಿಗೆ ನೆರವೇರುವುದೋ ಯಾರೂ ಊಹಿಸಲಾರರು…. ಬರಿಯ ಮೂಳೆ-ಮಾಂಸದ ದೇಹದೊಳಗೆ ಉಸಿರಾಟದಿಂದಷ್ಟೇ ಅಸ್ತಿತ್ವವಿದೆ…. ನಾನು-ನನ್ನದು ಎಂಬ ಆತನ ಅಸ್ತಿತ್ವ ಇರುವುದು ಆತನ ಪ್ರಾಣದಲ್ಲಿಯಷ್ಟೇ.,ಆತನ ಅಸ್ಥಿತ್ವದ ಕುರುಹಾಗಿರುವ ಆತನ ಉಸಿರೇ ಇಲ್ಲವಾದಾಗ ಅವನ ಕನಸುಗಳೆಲ್ಲಿ, ನಿರೀಕ್ಷೆಗಳೆಲ್ಲಿ, ತಾನು ತನ್ನದೂ ಎಂಬ ಒಣಪ್ರತಿಷ್ಟೆಗಳೆಲ್ಲಿ ಉಳಿದಾವು? ? ಜೀವನದಲ್ಲಿ ಮನುಷ್ಯ ಸುಖಕ್ಕಾಗಿಯಷ್ಟೇ ಪರಿತಪಿಸುತ್ತಾನೆ., ತನ್ನ ಹಿತಕ್ಕಾಗಿ ಏನನ್ನಾದರೂ ಮಾಡಬಲ್ಲ., ನಾಲ್ಕು ದಿನದ ಈ ಬದುಕಿಗೆ ಏನಾದರೂ ಮಾಡಬಲ್ಲ., ತನ್ನ ಬದುಕನ್ನು ಕೇವಲ ತನ್ನ ಕನಸುಗಳ,ಬಯಕೆಗಳ ತೃಪ್ತಿಗಾಗಿಯಷ್ಟೇ ಸೀಮಿತಗೊಳಿಸುತ್ತಾನೆ…. ತನ್ನ ನಶಿಸುವ ದೇಹಕ್ಕಾಗಿ ದುಡಿದು ಹಣ್ಣಾಗಿರುತ್ತಾನೆ, ಅದೆಷ್ಟರ ಮಟ್ಟಿಗೆ ಎಂದರೇ ತನ್ನ ಜಗತ್ತಿನಿಂದ ಹೊರಬರಲೂ ಸಾಧ್ಯವಾಗದ ಸ್ಥಿತಿಗೆ ಬಂದಿರುತ್ತಾನೆ ತನ್ನ ಭವ ಸಾಗರದ ಆಳದಲ್ಲಿ ಹೊಕ್ಕವನಿಗೆ ಇನ್ನೊಂದು ಸುಪ್ತ ಅಲೌಕಿಕ ಲೋಕದ ಸೌಂದರ್ಯದ ಸ್ವಾದವನ್ನು ಆಘ್ರಾಣಿಸುವ ವ್ಯವದಾನ ಅಥವಾ ಸಮಯವಂತೂ ಇರುವುದಿಲ್ಲ…. ತನ್ನ ಬಯಕೆಗಳಿಗೆ,ತನ್ನ ಕನಸುಗಳಿಗಷ್ಟೇ ತನ್ನ ಪ್ರಂಪಂಚದಲ್ಲಿ ಬೇಲಿ ಹಾಕಿಕೊಂಡು ಬದುಕುವ ಬರಾಟೆಯಲ್ಲಿರುತ್ತಾನೆ…. ಅದಕ್ಕೆ ಕೊನೆ ಎಂದೋ ಶುರುವೆಂದೋ…..

ತನಗಾಗಿ, ತನ್ನ ಸ್ವಾರ್ಥಕ್ಕಾಗಿ ಹಾಕಿಕೊಂಡ ಬೇಲಿ ಒಂದು ದಿನ ತಾನಾಗೇ ಕಳಚಿ ಬೀಳುತ್ತದೆ ಎಂಬುದು ಅರಿವಿದ್ದರೂ ಬಿಡದ ನಿರೀಕ್ಷೆ…! ತನ್ನದಲ್ಲದರ ಬಗ್ಗೆ ಅತಿಯಾದ ವ್ಯಾಮೋಹ.,ಬಿಡದ ಹುಚ್ಚು, ಸುಪ್ತಪ್ರಜ್ಞೆಯಲ್ಲಿ ತನ್ನನ್ನು ಯಾವಾಗಲೂ ಕೈ ಬೀಸಿ ಕರೆಯುತ್ತಾ ಜಾಗೃತಗೊಳಿಸುವ ಆಧ್ಯಾತ್ಮಿಕ ಶಕ್ತಿಯ ಶಾಶ್ವತ ಸುಖದತ್ತ ಹೊರಳಲು ಮನಸ್ಸು ಹಿಂಜರೆಯುತ್ತದೆ..

ಜೀವನದ ಸಣ್ಣ ಪುಟ್ಟ ಕನಸುಗಳ ಅಥವಾ ಗುರಿಯ ಈಡೇರಿಕೆಯನ್ನೇ ಮಹಾನ್ ಸಾಧನೆಯೆಂಬಂತೆ ಬೀಗುತ್ತಾನೆ.. ಆದರೆ ಇದಕ್ಕೂ ಮಿಗಿಲಾದ ಆಧ್ಯಾತ್ಮಿಕ ಸುಖ ತೀರದಾಚೆ ಕೈ ಬೀಸಿ ಕರೆಯುತ್ತಿದೆ.,ಮನುಷ್ಯನ ನಿಜವಾದ ಸುಖವಿರುವುದು ಆಧ್ಯಾತ್ಮಿಕ ಸಾಧನೆಯಲ್ಲಿ….! ಇರುವುದೆಲ್ಲವನ್ನೂ ಬದಿಗೊತ್ತಿ ಇರದಿರುವ ಅಥವಾ ಶಾಶ್ವತ ವಲ್ಲದ ಬೌತಿಕ ಜಗತ್ತಿನ ಸಂಬಂಧಗಳಿಗಾಗಿ,ಬೌತಿಕ ವಸ್ತುಗಳಿಗಾಗಿ ಕೊನೆಗೆ ನಮ್ಮ ಬೌತಿಕ ದೇಹದ ಸುಖಕ್ಕಾಗಿ ದಿನಬೆಳಗಾದರೇ ಹೆಣಗುತ್ತಲೇ ಇರುತ್ತಾನೆ.,ನಾನು ನನ್ನದೆಂಬ ಬಂಧನದಾಚೆಗಿನ ಸುಪ್ತ ಸಮುದ್ರವನ್ನು ಸೇರಬೇಕೆನ್ನುವ ಆಸೆ ಅಥವಾ ಬಯಕೆ ಅದು ಅಂತಿಮ ಘಟ್ಟ., ಅಧ್ಯಾತ್ಮಿಕ ಸಾಗರದೆಡೆ ದೂರದಿಂದೆಲ್ಲೋ ಕೂಗಿ ಕರೆಯುತ್ತಿರುವ ಮುರಳಿಯ ಕರೆಗೆ ‘ ಓ ಎನ್ನಬೇಕಿದೆ’.. ಒಮ್ಮೆ ಆ ನಾದಕ್ಕೆ ಸೋತರೇ ಇನ್ನೆಂದಿಗೂ ಯಾವುದಕ್ಕೂ ಸೋಲಲಾರರು,ಒಮ್ಮೆ ಆ ನಾದವನ್ನು ಅರಸಿ ಅಲ್ಲಿ ತಲುಪಿದ್ದೆ ಆದರೆ ಮತ್ತೆಂದು ಹಿಂದಕ್ಕೆ ಬರಲಾರಿರಿ,. ಆ ಮೋಹಕ ಆಧ್ಯಾತ್ಮಿಕ ಧ್ವನಿಯ ಶಕ್ತಿಯ ಸುಖ ಎಂದಿಗೂ ನಾಶವಾಗಲಾರದು…. ‘ಯಾವ ಮೋಹನ ಮುರಳಿಯ ಕರೆಯೋ’…. ‘ಯಾವ ಬೃಂದಾವನದ ಸೆಳೆತವೋ’…. ಕೊನೆಗೆ ಶಾಶ್ವತ ಸುಖದತ್ತ ಕೊಂಡೊಯ್ದಿತ್ತು……

-ಅಕ್ಷತಾ ಹೆಚ್ ಎಸ್

Posted in ಕಥಾಸರಣಿ, ಗೀತ್ ಕಹಾನಿ | Tagged , , , | Leave a comment

ಅರಿಕೆ

A street child eating in Kathmandu, Nepal

ತುತ್ತೆಸೆದು ಬರುವಾಗ ಬರಲಿಲ್ಲವೇ
ನೆನಪು ಎಷ್ಟೋ ದಿನ ಎಷ್ಟೋಕ್ಷಣ ತುತ್ತಿಲ್ಲದೇ
ಬಳಲಿರುವ ಕ೦ದಮ್ಮನ ಕರುಳು.

ವಸನ ವೈಢೂರ್ಯ ಕ೦ಡ೦ತೆ
ಕೊಳುವಾಗ ಬರಲಿಲ್ಲವೇ ನೆನಪು
ಬಟ್ಟೆಯಿಲ್ಲದ ಬರಿ ಮೈಯ ಬಡಕಲಿನ ದೇಹ

ಸಿಕ್ಕ೦ತೆ ಮನೆಗೆಲಸ ಮೈಮುರಿದು
ದುಡಿವ ಕ೦ದಮ್ಮ ಬಿಕ್ಕಳಿಸಿ ಅಳುವಾಗ ಬರಲಿಲ್ಲವೇ ನೆನಪು
ನಿನ್ನ ಹೆತ್ತ ಕುಡಿಯ೦ತೆ ಈ ಕ೦ದಮ್ಮ.

ಬಣ್ಣಗಳ ನೀರೆರಚಿ., ಪಟಾಕಿಗಳ
ಸ೦ಭ್ರಮದಿ ಸುಡುವಾಗ ಬರಲಿಲ್ಲವೇ ನೆನಪು
ಬಾಳಬೆಳಕಡಗಿದ(ಬೆಳಕರಿಯದ) ನಿರ್ಗತಿಕ ಕ೦ದಮ್ಮಗಳಾ

ಪುರಮನೆ ಅರಮನೆಗಳಾ ವೈಭೋಗಕಾಸೆಪಡುವಾಗ
ಬರಲಿಲ್ಲವೇ ನೆನಪು ಸೂರಿಲ್ಲದೇ
ಬೀದಿಯಲಿ (ಬವಣೆಯಲಿ )ಮಲಗಿರುವ ಕ೦ದಮ್ಮಗಳಾ

ನಿನ್ನ ಹಿತ ,ನಿನ್ನೊಳಿತು , ನಿನ್ಹಿರಿಮೆ
ಮೆರೆವಾಗ ಬರಲಿಲ್ಲವೇ ನೆನಪು
ಈ ಪುಟ್ಟ ಬಡ ಕ೦ದಮ್ಮಗಳಾ.

ನನ್ನ ನೆಲ, ನನ್ನ ಜಲ..,ನನ್ನದೇ
ಎನ್ನುತಿರುವಾಗ ಬರಲಿಲ್ಲವೇ ನೆನಪು
ನಿನ್ನದೆ೦ಬುವ ಈ ಪ್ರಪ೦ಚ ನಿನ್ನದಲ್ಲ.

ನಡುಗುತಿರೆ ಈ ನೆಲವು, ಮನೆಮಠವು
ಉರುಳಿರಲು (ಬರಲಿಲ್ಲವೇ ನೆನಪು)
ನಿನ್ನದೆನ್ನುವುದೆಲ್ಲಾ ಏನೂ ಇಲ್ಲಾ.

ನಿನ್ನ ಹೊಲ., ನಿನ್ನ ಮನೆ ನಿನ್ನದೆ೦ಬುವುದೆಲ್ಲಾ
ಗಡಗಡಿಸಿದಾಗ (ಬರಲಿಲ್ಲವೇ ನೆನಪು)
ನಿನ್ನದೆ೦ಬುವುದೇನೂ ಉಳಿಯದಲ್ಲಾ.

ಕಣ್ಣಿನಲಿಷ್ಟು ಹನಿ ಉಳಿದಿರುವುದಾದರೆ
ತೊಡು ಪ್ರಣವಾ.. ದಾನಕೊಡು ವ೦ಚಿಸದೇ
ಕೊ೦ಚವಾದರು ಸರಿ ನಿನ್ನ ಸ೦ಚಿತದ ಧನವಾ

—ವಾಯ್ಕೆ—

Posted in ಕವಿ - ಕಾವ್ಯ, ಪರಿ ಪರಿತಾಪ | Tagged , | Leave a comment

ನಿಮಗಾಗಿ ನಾವು ಏನನ್ನೂ ಕೊಡಲಾರದವರಂತಾಗಿದ್ದೇವೆ, ಎರಡು ಹನಿ ಕಣ್ಣೀರಿನ ವಿನಹ.

ನಾಗೇಶ್ ಹೆಗಡೆ ಅವರ “ಸಿಯಾಚಿನ್ ಹಿಮದಲ್ಲಿ ಹೂತ ಪ್ರಶ್ನೆಗಳು” ಲೇಖನ ಓದುತ್ತಿದ್ದೆ.. ಅದರಲ್ಲಿ ಅವರು ಹಿಮಪರ್ವತಗಳ ಬಗ್ಗೆ, ಅಲ್ಲಿನ ಸ್ಥಿತಿಗತಿಗಳು, ಅಂಥ ದುರ್ಗಮ ಪ್ರದೇಶಗಳಲ್ಲಿ ಚಲಿಸುವಾಗ ಮುನ್ನೆಚ್ಚರಿಕೆಗೆ ಇರುವ ನಾನಾ ಬಗೆಯ ಸಾಧನ ಸಲಕರಣೆಗಳ ಬಗ್ಗೆ, ಅಪಾಯ ಸಂಭವಿಸಿದ ಮೇಲೂ ಕಂಡುಹಿಡಿಯಬಹುದಾದ ಸಾಧ್ಯತೆಗಳ ಬಗ್ಗೆ ಮತ್ತು ಅದಕ್ಕಾಗಿ ಇರುವ ಉಪಕರಣಗಳ ಬಗ್ಗೆ  ಹೇಳುತ್ತ ಹೋಗುತ್ತಾರೆ.. ಕೆಳಹಂತದ ಯೋಧರ ಸುರಕ್ಷೆಗೆ ನಾವು ಆದ್ಯತೆ ಕೊಡುವುದೇ ಕಡಿಮೆ. ನಕ್ಸಲರ ಗುಂಡಿಗೆ, ಉಗ್ರರ ದಾಳಿಗೆ ಎಷ್ಟೊಂದು ಸೈನಿಕರು ಬಲಿಯಾಗುತ್ತಾರೆ. ಯೋಧರಿಗಿಂತ ಉಗ್ರರ ಬಳಿಯೇ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಸಂಪರ್ಕ ಸಾಧನಗಳು ಇರುತ್ತವೆ ಎಂಬ ಅವರ ಮಾತು ನಿಜಕ್ಕೂ ಹೃದಯಕ್ಕೆ ನಾಟುವಂಥ ಮತ್ತು ಒಪ್ಪಿಕೊಳ್ಳಲಾಗದ ಸತ್ಯದಂತೆ ಕಾಣುತ್ತೆ. ಕೊನೆಯಲ್ಲಿ “ಇಡೀ ದೇಶ ಉಸಿರು ಬಿಗಿ ಹಿಡಿದು ಅವರ ಚೇತರಿಕೆಯನ್ನು ಹಾರೈಸುತ್ತಿದೆ. ಅವರು ಮೊದಲಿನಂತಾಗಬೇಕು. ಹಿಮಕುಸಿತದಿಂದ ಎದ್ದು ಬಂದ ಕತೆಯನ್ನು ಹೇಳುವಂತಾಗಬೇಕು” ಎಂದು ಪ್ರಾರ್ಥಿಸುತ್ತಾರೆ.. ನನ್ನ ಮನಸ್ಸೂ ಪ್ರಾರ್ಥಿಸುತ್ತಿತ್ತು. ಕೋಟಿ ಕೋಟಿ ಭಾರತೀಯರ ಕರೆ ಕೇಳು ದೇವರೆ ಎನ್ನುತ್ತಿತ್ತು.. ಅಷ್ಟರಲ್ಲಿ ಹನುಮಂತಪ್ಪನ ಮರಣದ ಸುದ್ದಿ ಮಾಧ್ಯಮದಲ್ಲಿ ಬಿತ್ತರಗೊಳ್ಳಲು ಆರಂಭವಾಯಿತು.. ಮನಸ್ಸೆಲ್ಲ ಖಾಲಿ ಖಾಲಿ, ಯಾವುದು ಒಂದು ಕ್ಷಣ ನೆನಪಾಗದ ಸ್ಥಿತಿ.. ಉಸಿರು ಬಿಗಿ ಹಿಡಿದಿದ್ದ ಸಹೋದರ ಉಸಿರು ಚೆಲ್ಲಿದ್ದ.. ದೇವರಿಗೂ ಪ್ರೀತಿಯಾದ ಯೋಧ, ಭಾರತೀಯರ ಹೃದಯದಲ್ಲಿ ಶಾಶ್ವತ ಚಿತ್ರವಾಗಿ ಉಳಿದುಬಿಟ್ಟ.. ಆತನ ಆತ್ಮಕ್ಕೆ ಶಾಂತಿ ಸಿಗಲಿ..

ಜಗತ್ತಿನ ಎತ್ತರದ ಯುದ್ಧಭೂಮಿಯಲ್ಲಿ ಸಂಭವಿಸಿದ ಹಿಮಕುಸಿತಕ್ಕೆ ಹತ್ತು ಯೋಧರ ಬಲಿ ಆಯ್ತು.. ಆರು ದಿನಗಳ ನಂತರ ಸಿಕ್ಕಿದ್ದು ಯೋಧ ಹನುಮಂತಪ್ಪ.. ಉಸಿರಾಟ ಇನ್ನೂ ಇತ್ತು. ಮೂವತ್ತೈದು ಅಡಿ ಹಿಮ ಮೈಮೇಲಿದ್ದರೂ ಆರು ದಿನಗಳ ಕಾಲ ಉಸಿರು ಹಿಡಿದು ಬದುಕಿದ್ದ ವೀರ ಈತ. ಆತನನ್ನು ಅಪ್ಪಿಕೊಳ್ಳಲು ಸಾವು ತೆಗೆದುಕೊಂಡಿದ್ದು ಬರೋಬ್ಬರಿ ಒಂಭತ್ತು ದಿನಗಳು. ಬಹುಶಃ ಸಾವೂ ಸಹ ಆತನ ಬಳಿ ಬರುವಾಗ ಅವನ ಧೀರತನಕ್ಕೆ ಸಲಾಂ ಹೊಡೆದಿತ್ತೇನೊ ಅನ್ನಿಸುತ್ತೆ.. ಪಠಾಣಕೋಟ್ ಧಾಳಿಯಲ್ಲಿ ಮಡಿದ ಯೋಧರ ಸೂತಕದ ಛಾಯೆ ಮಾಯವಾಗುವ ಮೋದಲೇ ಮತ್ತೊಂದು ನೋವು ನಮ್ಮ ಮನಸ್ಸಿನಲ್ಲಿ ಮನೆ ಮಾಡಿದೆ. ಶರಣರು ಮತ್ತು ಸೈನಿಕನ ಗುಣ, ವ್ಯಕ್ತಿತ್ವ ಮತ್ತು ಅವರ ಮೇಲಿನ ಪ್ರೀತಿ, ಗೌರವಗಳು ಮರಣದಲ್ಲಿ ಕಾಣುತ್ತವೆ ಎಂಬ ಮಾತಿನಂತೆ, ಹನುಮಂತಪ್ಪನ ಅಂತ್ಯಸಂಸ್ಕಾರಲ್ಲಿ ಮುಗಿಲುಮುಟ್ಟಿ ರೋದನೆ, ಸೇರಿದ್ದ ಜನ ಎಲ್ಲವೂ ಏನನ್ನು ನಾವು ಕಳೆದುಕೊಂಡಿದ್ದೇವೆ ಎಂಬುದನ್ನು ಸಾರುತ್ತಿತ್ತು. ಮತ್ತೆ ಹುಟ್ಟಿ ಬಾ ಓ ಯೋಧ ಎಂಬ ಕೂಗು ಮತ್ತೆ ಮತ್ತೆ ಮನಸ್ಸಿನಲ್ಲಿ ಮೂಡುತ್ತಿತ್ತು.

ಸಿಯಾಚಿನ್. ಸಮುದ್ರ ಮಟ್ಟದಿಂದ ಅತ್ಯಂತ ಎತ್ತರ, ಅಂದರೆ ಸುಮಾರು 20 ಸಾವಿರ ಅಡಿ ಎತ್ತರವಿರುವ ಎತ್ತರಲ್ಲಿರುವ ಜಗತ್ತಿನ ಅತ್ಯಂತ ಎತ್ತರದ ಯುದ್ಧಭೂಮಿ. ಕುಮಾಂವು ರೆಜಿಮೆಂಟ್‌ನಲ್ಲಿ 30 ವರ್ಷಗಳ ಕಾಲ ಕೆಲಸ ಮಾಡಿ ಲೆಫ್ಟಿನೆಂಟ್‌ ಜನರಲ್‌ ಆಗಿ ನಿವೃತ್ತಿ ಹೊಂದಿದ ಧಾರವಾಡದ ಶ್ರೀಕೃಷ್ಣ ಸರದೇಶಪಾಂಡೆ ಹಾಗೂ ನಿವೃತ್ತ ಏರ್‌ ಕಮಾಂಡರ್‌ ವಸಂತ ವಾಯಿ ಪ್ರಜಾವಾಣಿಗೆ ಪ್ರತಿಕ್ರೀಯೆ ನೀಡುವಾಗ ಹೇಳುವುದನ್ನು ಓದುತ್ತಿದ್ದರೆ ಮೈ ಜುಂ ಎನ್ನುತ್ತೆ. ಯಾಕೆಂದರೆ ಅಲ್ಲಿನ ಪರಿಸ್ಥಿತಿ, ಹವಾಮಾನ ಹಾಗಿದೆ. ಸಮುದ್ರ ಮಟ್ಟದಿಂದ ಅಷ್ಟು ಎತ್ತರವಿರುವ ಸಿಯಾಚಿನ್‌ ಸೇನಾ ನೆಲೆಯಲ್ಲಿ –50 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರುತ್ತದೆ. ಅಲ್ಲಿ ಒಂದು ಚಪಾತಿ ತಯಾರಿಸುವ ವೆಚ್ಚವೇ 125 ರೂಪಾಯಿಗಳು. ಸೈನಿಕರನ್ನು ಬೆಚ್ಚಗಾಗಿಡಲು ದುಬಾರಿ ಮೊತ್ತದ ಬೂಟುಗಳು, ಕಾಲುಚೀಲಗಳು, ಏರ್‌ ಪ್ಯಾಕೆಟ್‌ಗಳು, ಫೈಬರ್‌ ಬ್ಯಾಗ್‌ಗಳು, ಸೆಟಲೈಟ್‌ ಫೋನ್‌ಗಳ ನಿರ್ವಹಣೆ ಹೀಗೆ ಭಾರತ ಸರ್ಕಾರ ಸಿಯಾಚಿನ್’ಗಾಗಿ ನಿತ್ಯ ಮಾಡುವ ವೆಚ್ಚ 5 ಕೋಟಿ! ಎಂದರೆ ನಂಬಲೇಬೇಕು ಎನ್ನುತ್ತಾರೆ ಕಮಾಂಡರ್. ಒಂದು ಬದಿಯಲ್ಲಿ ಪಾಕಿಸ್ತಾನ, ಮತ್ತೊಂದು ಬದಿಯಲ್ಲಿ ಚೀನಾದ ಸೈನಿಕರು ಭಾರತದ ಗಡಿಯನ್ನು ನುಸುಳಲು ಯತ್ನಿಸುವ ಪ್ರದೇಶ ಅದು. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಾರತೀಯ ಸೇನೆಯು 800 ಸೈನಿಕರನ್ನು ಸಿಯಾಚಿನ್‌ನಲ್ಲಿ ನಿಯೋಜಿಸಿದ್ದು, ಈ ಸೇನಾ ಶಿಬಿರ ನಿರ್ವಹಣೆಗೆ ಅಷ್ಟು ವೆಚ್ಚ ಮಾಡುವುದು ಅನಿವಾರ್ಯ ಎಂದು ಅವರು ಹೇಳಿದ್ದನ್ನು ಓದುತ್ತಿದ್ದರೆ ಅಲ್ಲಿ ಕೆಲಸ ಮಾಡುವ ಎಲ್ಲ ಸೈನಿಕರಿಗೂ ಒಂದು ಸೆಲ್ಯೂಟ್ ಮಾಡಲೇಬೇಕು ಎಂದು ಅನ್ನಿಸದೇ ಇರಲಾರದು.

“ಸಿಯಾಚಿನ್‌ ಎಂಬುದೇ ಒಂದು ದೊಡ್ಡ ಹಿಮನದಿ. ಪ್ರತಿವರ್ಷ 2 ಇಂಚಿನಷ್ಟು ಹಿಮ ಕುಸಿಯುತ್ತದೆ. ಇದೇ ಸಮಯವನ್ನು ಭಿಲಾ ಕೊಂಡ್ಲಾ ಬಳಿ ಸೇನಾ ಶಿಬಿರ ಹೊಂದಿರುವ ಪಾಕಿಸ್ತಾನ ಸೈನಿಕರು ಹಾಗೂ ಕಾರಾಕೋರಂ ಬಳಿ ತಮ್ಮ ನೆಲೆ ಹೊಂದಿರುವ ಚೀನಿ ಸೈನಿಕರು ಕಾಯುತ್ತಿರುತ್ತಾರೆ. ಈ ಪ್ರದೇಶದಲ್ಲಿ ಆಮ್ಲಜನಕ ಪ್ರಮಾಣ ಶೇ 10ರಷ್ಟು ಮಾತ್ರ ಇರುತ್ತದೆ. ಈ ಕನಿಷ್ಠ ಮಟ್ಟದ ಆಮ್ಲಜನಕ ಪಡೆದೂ ಬದುಕುಳಿಯಲು ಸೈನಿಕರಿಗೆ ತಿಂಗಳುಗಟ್ಟಲೇ ತರಬೇತಿ ಕೊಡಲಾಗಿರುತ್ತದೆ. ಬೇಸ್‌ ಕ್ಯಾಂಪ್‌ನಿಂದ ನೇರವಾಗಿ ಮೇಲ್ಮಟ್ಟಕ್ಕೆ ಹೆಲಿಕಾಪ್ಟರ್‌ ಮೂಲಕ ಈ ಸೈನಿಕರನ್ನು ಒಯ್ಯುವುದಿಲ್ಲ. ಹಾಗೆ ಕರೆದೊಯ್ದರೆ ಕೆಲವೇ ದಿನಗಳಲ್ಲಿ ಆ ಸ್ಥಿತಿಗೆ ಹೊಂದಿಕೊಳ್ಳಲಾಗದೇ (ಅಕ್ಲೆಮೆಟೈಜೇಷನ್‌) ಸಾವಿಗೀ ಡಾಗುವ ಸಂಭವವೂ ಇರುತ್ತದೆ. ಅದರ ಬದಲು ನಡೆದುಕೊಂಡೇ ಆ ಎತ್ತರವನ್ನು ತಲುಪಲು ಸೈನಿಕ ರಿಗೆ ಒಂದು ತಿಂಗಳು ಕಾಲಾವಕಾಶ ಬೇಕು. ‘ಸಿಯಾಚಿನ್‌ನಲ್ಲಿ ನಡೆಯುವ ಯುದ್ಧದಲ್ಲಿ ಮಡಿಯುವ ಯೋಧರು ಶೇ 20ರಷ್ಟು ಮಾತ್ರ. ಶೇ 80ರಷ್ಟು ಸೈನಿಕರು ಹಿಮ ಕಡಿತ, ಗ್ಯಾಂಗ್ರಿನ್‌, ಹಿಮ ಕುಸಿತದಿಂದಾಗಿಯೇ ಸಾವಿಗೀಡಾಗುತ್ತಾರೆ. ಆದರೆ ಯಾವುದೇ ಬೆಲೆ ತೆತ್ತಾದರೂ ಸರಿ ಸಿಯಾಚಿನ್‌ ಭಾಗವನ್ನು ಉಳಿಸಿಕೊಳ್ಳಬೇಕು”’ ಎನ್ನುತ್ತಾರೆ ಸರದೇಶಪಾಂಡೆ. ಎಂತಹ ದೇಶಪ್ರೇಮ ಅಲ್ಲವೇ..?? ಇಷ್ಟೆಲ್ಲ ಖರ್ಚು ಮಾಡಿ ಆ ಪ್ರದೇಶವನ್ನು ಉಳಿಸಿಕೊಳ್ಳುವ ದರ್ದು ಇದೆಯಾ..? ಎಂದು ಕೇಳುವ ಕೆಲವು ಬುದ್ಧಿಹೀನ ಜನರಿಗೆ ಏನೆನ್ನಬೇಕು ಎಂದೇ ಅರ್ಥವಾಗುವುದಿಲ್ಲ..

1984 ರಲ್ಲಿ ಆಪರೇಷನ್ ಮೇಘದೂತ್ ನಿಂದ ಸಿಯಾಚಿನ್ ನೆತ್ತಿ ತಲುಪಿದ ಭಾರತೀಯ ಸೇನೆ ಇಂದಿಗೂ ಪಹರೆ ಕಾಯುತ್ತಲೇ ಇದೆ. ಅದಕ್ಕೆ ಮುಖ್ಯ ಕಾರಣ ಚೀನಾದ ಬಳಿ ಇರುವ ಅಕ್ಸಾಯ್‌ ಚಿನ್‌ ಪ್ರಾಂತ್ಯ ಮತ್ತು ಪಾಕಿಸ್ತಾನದ ಬಳಿ ಇರುವ ಕಾರಕೋರಂ ಪ್ರದೇಶ. ಇವೆರಡೂ ಸಂಪರ್ಕಿಸುವುದು ಸಿಯಾಚಿನ್ ನಲ್ಲಿ. ಒಂದು ವೇಳೆ ಈ ಪ್ರದೇಶ ಚೀನಾ ಅಥವಾ ಪಾಕಿಸ್ತಾನ, ಯಾವುದೇ ದೇಶದ ಪಾಲಾದರೂ ಮುಂದೆ ಲಡಾಕ್ ತನಕವೂ ದೇಶ ವಿಸ್ತರಿಸುವ ಸಾಧ್ಯತೆಗಳಿವೆ. ಹಾಗಾಗಿ ಯಾವುದೇ ಕಾರಣಕ್ಕೂ ಸಿಯಾಚಿನ್‌ ಭಾಗವನ್ನು ಉಳಿಸಿಕೊಳ್ಳಲೇಬೇಕು. ಕೇವಲ ಹಣವನ್ನು ನೋಡಿ ಅಥವಾ ಪ್ರಯೋಜನಗಳನ್ನು ನೋಡಿ ಒಂದು ಪ್ರದೇಶವನ್ನು ಅಳೆಯಲು ಸಾಧ್ಯವಿಲ್ಲ. ಸುಮಾರು 74 ಕಿ.ಮೀ. ವಿಸ್ತಾರದ ಆಯಕಟ್ಟಿನ ಈ ಪ್ರದೇಶ ಭಾರತದ ಭದ್ರತೆಯ ಕಿರೀಟವಿದ್ದಂತೆ. ಅದಕ್ಕಾಗಿ ಭಾರತದ ಸೈನಿಕರು ಎಷ್ಟೋ ವರ್ಷಗಳಿಂದ ಕಾವಲು ಕಾಯುತ್ತ, ಪ್ರಾಣಾರ್ಪಣೆ ಮಾಡುತ್ತ ಕಾಪಾಡುತ್ತಿದ್ದಾರೆ. ಎಂತಹ ಪರಿಸ್ಥಿತಿಯಲ್ಲಿಯೂ ಕಾವಲು ನಿಲ್ಲಿಸದು.

ಇದೆಲ್ಲದರ ಅರಿವು ನಮ್ಮಲ್ಲಿ ಮೂಡಿದಾಗ ಸೈನಿಕರ ಪರಿಸ್ಥಿತಿ, ಬವಣೆ ಎಲ್ಲವೂ ಗಮನಕ್ಕೆ ಬರಬಹುದು. ಆದರೆ ಅದೆಲ್ಲ ಪರಿಸ್ಥಿತಿ ಇದ್ದರೂ ಅವರು ಹಿಂದೆಗೆಯಲಾರರು, ಯಾಕೆಂದರೆ ಅವರ ಮನಸ್ಸಿನಲ್ಲಿ ಇರುವುದು ಒಂದೇ, ಅದು ಭಾರತ. ಅದು ಸಾಮಾನ್ಯರ ಅದರಲ್ಲೂ ಸಿಯಾಚಿನ್ ಬೇಕಾ..?? ಎಂದು ಪ್ರಶ್ನಿಸುವವರ ಮನಸ್ಸಿನಲ್ಲಿ ಬರುತ್ತದಾ..?? ಬಹುಶಃ ಸಾಧ್ಯವಿಲ್ಲ ಅನ್ನಿಸುತ್ತೆ. ಎಲ್ಲ ಯೋಧರಿಗೆ ಆತ್ಮಪೂರ್ವಕ ಶೃದ್ಧಾಂಜಲಿ ಎಂಬ ಬೇಜವಾಬ್ದಾರಿ (ಅದನ್ನು ಕಾಟಾಚಾರ ಎಂದೂ ಹೇಳಬಹುದು) ಹೇಳಿಕೆಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಾಕುವ ಜನರಿಗೆ ಇದರ ಅರಿವು ಹೇಗೆ ಮೂಡಲು ಸಾಧ್ಯ..?? ನಟ ಉಪೇಂದ್ರ ಹೇಳುವಂತೆ ದೇಶಕ್ಕಾಗಿಯೇ ಉಸಿರು ಹಿಡಿದು, ದೇಶಕ್ಕಾಗಿಯೇ ಉಸಿರು ಚೆಲ್ಲಿದ ಮಹಾನುಭಾವರು ಇವರು. ಯಾವುದೇ ಜಾತಿ, ಧರ್ಮ, ಪಂಥ ಇವರಿಗೆ ಸಂಭಂಧವಿಲ್ಲ, ಇರುವುದು ಒಂದೇ, ಅದು ಭಾರತೀಯತೆ ಮತ್ತು ಭಾರತ ಮಾತೆ. ಸತ್ತ ಹತ್ತು ಜನರಲ್ಲಿ ಹಿಂದೂಗಳೂ ಇದ್ದಾರೆ ಮುಸ್ಲೀಮರಾದ ಮುಷ್ತಾಕ್ ಅಹ್ಮದ್ ಸಹ ಇದ್ದಾರೆ. ಧರ್ಮ ಯಾವುದಾದರೇನು ದೇಶಕ್ಕೆ..?? ನಮ್ಮ ಪಾಲಿಗೆ ಎಲ್ಲ ಯೋಧರೂ ವೀರರೇ. ಅವರಿಗೆ..?? ಅವರಿಗೂ ಸಹ ಅಷ್ಟೇ ಕೇವಲ ಭಾರತ ಮಾತ್ರ, ಯಾವ ರಾಜ್ಯ, ಧರ್ಮಗಳ ವ್ಯತ್ಯಾಸವಿಲ್ಲ..

ಇನ್ನು ಕೆಲವರು ಕೇವಲ ಹನುಮಂತಪ್ಪನನ್ನು ಮಾತ್ರ ಹೀರೊ ಆಗಿ ಮಾಡಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದಾರೆ. ಇಲ್ಲಿ ಒಂದು ವಿಷಯ ಗಮನಹರಿಸಲೇಬೇಕು. ಅದೇನೆಂದರೆ, ಹನುಮಂತಪ್ಪ ಆರು ದಿನಗಳು ಅಂದರೆ 144 ಘಂಟೆಗಳ ನಂತರವೂ ಪ್ರಾಣದೊಡನೆ ಇದ್ದ, ಇದು ತುಂಬಾ ಅಪರೂಪದ, ಒಂದು ಹಂತದಲ್ಲಿ ಅಸಾಧ್ಯ ಎಂದೇ ಹೇಳಬಹುದಾದ ಘಟನೆ ಆಗಿದ್ದರಿಂದ ಹನುಮಂತಪ್ಪನ ವಿಷಯ ಹೆಚ್ಚು ಪ್ರಚಾರಕ್ಕೆ ಬಂತೇ ವಿನಹ, ಮರಣವನ್ನಪ್ಪಿದ ಎಲ್ಲ ಯೋಧರಬಗ್ಗೆಯೂ ವಿಷಾದವಿದೆ, ದುಃಖವಿದೆ. ಹತ್ತು ಸಹೋದರರನ್ನು ನಾವು ಕಳೆದುಕೊಂಡಿದ್ದೇವೆ ಎಂಬ ನೋವು ಕಾಡುತ್ತಲೇ ಇದೆ. ಎಲ್ಲರೂ ನಮ್ಮವರು. ಇದೆಲ್ಲವನ್ನು ಹೇಳಿ ಇಂತಹ ವಿಷಯಗಳಲ್ಲೂ ಚಿಲ್ಲರೆ ಬುದ್ಧಿಯನ್ನು ತೋರಿಸಿಕೊಳ್ಳುತ್ತಿರಾದರೆ ಕ್ಷಮಿಸಿ, ನಿಮಗೆ ಸಮಜಾಯಿಸಿ ಕೊಡುವದಕ್ಕಿಂತ ಅವರಿಗಾಗಿ ಒಂದು ಹನಿ ಹೆಚ್ಚು ಕಣ್ಣೀರು ಮಿಡಿದರೆ ಸಾರ್ಥಕವೆನಿಸುವುದೇನೊ.

ಸಿಯಾಚಿನ್ ಹತ್ತು ಯೋಧರ ಬಲಿ ಪಡೆದಿದೆ. ಇದು ತುಂಬಲಾರದ ನಷ್ಟವೇ ಸರಿ. ಆದರೆ ದೇಶ ಧೃತಿಗೆಟ್ಟಿಲ್ಲ, ಮಡಿದವರು ಸುಮ್ಮನೇ ಸತ್ತಿಲ್ಲ. ಮೂವತ್ತೈದು ಅಡಿ ಹಿಮ ಬಿದ್ದರೂ ಆರು ದಿನಗಳ ಕಾಲ ಉಸಿರುಗಟ್ಟಿ ಬದುಕಿದ್ದ ಹನುಮಂತಪ್ಪ ಈ ದೇಶದ ಸೈನಿಕರ ತಾಕತ್ತು ಏನೆಂದು ತೋರಿಸಿಯೇ ಸತ್ತಿದ್ದಾರೆ. ಆ ಹಿಮಗಿರಿಗಳೇ ಸಲಾಂ ಹೊಡೆದು ಯೋಧರಿಗೆ ಶರಣಾಗಿವೆ ಎಂಬ ಕಲ್ಪನೆ ಮೂಡದಿರಲು ಸಾಧ್ಯವಿಲ್ಲ. ಆದರೆ ಸಹಚರರನ್ನು ಕಳೆದುಕೊಂಡ ದುಃಖವಿದ್ದರೂ ಸೈನಿಕರು ಸಿಯಾಚಿನ್ ಕಾಯಲು ಬದ್ಧರಾಗಿದ್ದೇವೆ ಎಂದು ತೋರಿಸಿದ್ದಾರೆ. ಯಾಕೆಂದರೆ ಹತ್ತು ಜನರ ಮರಣದ ನಂತರ ಅಂದರೆ ಇಪ್ಪತ್ನಾಲ್ಕು ಘಂಟೆಯ ಒಳಗಾಗಿ ಮತ್ತೊಂದು ತಂಡ ಕಾವಲಿಗೆ ನಿಂತಿದೆ. ಮತ್ತೆ ಮತ್ತೆ ಹಿಮಪಾತವಾದರೂ ಹೆದರಲಾರೆವು, ಗಡಿ ಬಿಟ್ಟು ಹಿಂದೆಗೆಯಲಾರೆವು ಎಂಬ ಸಂದೇಶ ನೀಡಿದ್ದಾರೆ. ಇದಲ್ಲವೇ ದೇಶಪ್ರೇಮ ಎಂದರೆ..?? ಕ್ಷಮಿಸಿ ಸಹೋದರರೆ, ನಿಮಗಾಗಿ ನಾವು ಏನನ್ನೂ ಕೊಡಲಾರದವರಂತಾಗಿದ್ದೇವೆ, ಸತ್ತಾಗ ಎರಡು ಹನಿ ಕಣ್ಣೀರಿನ ವಿನಹ.

-ಮಂಜುನಾಥ ಹೆಗಡೆ

Posted in ನಮ್ಮ ಮಾತು | Tagged , , , , | Leave a comment

ಬದಲಾವಣೆ ಆಗಲಿ, ಅದು ನಮ್ಮಿಂದಲೇ ಶುರುವಾಗಲಿ..

ಆಕಾಶಕ್ಕೆದ್ದು ನಿಂತ ಪರ್ವತ ಹಿಮ ಮೌನದಲ್ಲಿ
ಕರಾವಳಿಗೆ ಮುತ್ತ ನಿಡುವ ಪೆರ್ದೆರೆಗಳ ಗಾನದಲ್ಲಿ
ಬಯಲು ತುಂಬ ಹಸಿರ ದೀಪ ಹಚ್ಚಿ ಹರಿವ ನದಿಗಳಲ್ಲಿ
ನೀಲಿಯಲ್ಲಿ ಹೊಗೆಯ ಚಲ್ಲಿ ಯಂತ್ರ ಘೋಷವೇಳುವಲ್ಲಿ
ಕಣ್ಣು ಬೇರೆ, ನೋಟವೊಂದು- ನಾವು ಭಾರತೀಯರು.

ಪ್ರೇಮ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರ ಸಾಲುಗಳು ಇದು.. ಗಣರಾಜ್ಯೋತ್ಸವದ ಹೊಸ್ತಿಲಿನಲ್ಲಿ ಇರುವ ನಾವೆಲ್ಲರೂ ಅವರ ಈ ಸಾಲುಗಳನ್ನು ನೆನೆಯಲೇಬೇಕು… ಜೊತೆಗೆ ಒಂದಷ್ಟು ನಮ್ಮನ್ನು, ನಾವು ಬದುಕುತ್ತಿರುವ ಪರಿಯನ್ನು ಮತ್ತು ಸುತ್ತಲಿನ ಸ್ವಚ್ಛ ಸಮಾಜದ ಚಿಂತನೆಯನ್ನು ಅವಶ್ಯಕವಾಗಿ ಮಾಡಲೇಬೇಕು.. ಯಾಕೆಂದರೆ ಒಂದು ದೇಶ ಬೆಳಕಿನಿಂದ ಹೊಳೆಯಲು ಕೋಟಿ ಸಣ್ಣ ದೀಪಗಳು ಬೇಕು.. ಅಂತೆಯೇ ಭಾರತ ಪ್ರಕಾಶಿಸಲು ಬೇಕಾದ ದೀಪ ಹಚ್ಚಬೇಕಾದವರು ನಾವೇ ಅಲ್ಲವೆ..??

ಸಾವಿರ ಭಾಷೆ, ಸಾವಿರ ಸಂಸ್ಕೃತಿ, ಸಾವಿರ ಧರ್ಮ ಹೊಂದಿ, ನೂರಾರು ಕೋಟಿ ಮನಸ್ಸುಗಳನ್ನು ಹೊಂದಿದ ಅವಿಭಕ್ತ ಕುಟುಂಬ ನನ್ನ ದೇಶ.. ಅದು ಭಾರತ.. ನಾವೆಲ್ಲರೂ ಒಂದೇ ಜಾತಿ, ಒಂದೇ ಮತ, ಒಂದೇ ಕುಲ, ನಾವು ಭಾರತೀಯರು… ಇಲ್ಲಿ ಕೇಸರಿಯ ತ್ಯಾಗವಿದೆ, ಬಿಳಿಯ ಶುಭ್ರ ಶಾಂತಿಯಿದೆ, ಹಸಿರಿನ ಸಮೃದ್ಧಿಯಿದೆ, ಚಕ್ರದಂತೆ ವೇಗವಾಗಿ ಸಾಗುತ್ತಿರುವ ಪ್ರಗತಿಯಿದೆ.. ಅದಕ್ಕೊಂದು ಜೈ ಹಿಂದ್.. ವಂದೇ ಮಾತರಂ…ಎಷ್ಟೋ ಜನರ ತ್ಯಾಗದಿಂದ ನಗುತ್ತಿದೆ ಈ ನಮ್ಮ ದೇಶ.. ದೇಶ ಕಟ್ಟೋದಕ್ಕೆ ಎಷ್ಟು ಕಷ್ಟಗಳನ್ನು ಹಿರಿಯರು ಅನುಭವಿಸಿದ್ದಾರೆ ಎನ್ನುವುದನ್ನು ಒಮ್ಮೆ ಇತಿಹಾಸ ನೋಡಿದರೆ ತಿಳಿಯುತ್ತೆ.. ಸತ್ಯಾಗ್ರಹಗಳು, ಕ್ರಾಂತಿಕಾರಿ ಹೆಜ್ಜೆಗಳು, ಸಂಗ್ರಾಮಗಳು, ಒಂದೇ ಎರಡೇ.. ಇತಿಹಾಸದ ಪುಟದ ಪ್ರತೀ ಅಕ್ಷರಗಳಲ್ಲೂ ಅದನ್ನು ನಾವು ಕಾಣಬಹುದು.. ಹೋರಾಟದ ಸಾವು ನೋವಲ್ಲೂ ಸ್ವಾತಂತ್ರ್ಯದ ಹುಮ್ಮಸ್ಸು ಇತ್ತು.. ವಿಜಯೀ ವಿಶ್ವ ತಿರಂಗಾ ಪ್ಯಾರಾ ಅನ್ನುತ್ತ, ವಂದೇ ಮಾತರಂ ಎಂದು ಘೋಷಣೆ ಕೂಗುತ್ತಾ ಸ್ವಾತಂತ್ರ್ಯ ಎಂದು ಕೂಗಿ ಪಡೆದುಕೊಂಡೆವು.. ಕೊನೆಗೂ ಅದು ಸಿಕ್ಕಿತು.. ಸಂವಿಧಾನ ರಚನೆ ಆಯ್ತು..ಗಣರಾಜ್ಯವಾಯ್ತು… ಇವತ್ತಿಗೆ ಬರೋಬ್ಬರಿ ಅರವತ್ತಾರು ಕಳೆದು ಅರವತ್ತೇಳನೇ ವರ್ಷ.. ಕೋಟಿ ಕೋಟಿ ಭಾರತೀಯರಿಗೆ ಶುಭಾಶಯಗಳು…

ಕೆಲವು ತಿಂಗಳಿನ ಹಿಂದೆ ಮೌಂಟ್ ಕಾರ್ನೆಲ್ ಕಾಲೇಜ್ ನಲ್ಲಿ ರಾಹುಲ್ ಗಾಂಧಿ ಭಾಷಣದಲ್ಲಿ ಆದ ಯಸ್, ನೋ ಸಂಗತಿಗಳು ಎಲ್ಲರಿಗೂ ಗೊತ್ತು.. ಸ್ವಚ್ಚ ಭಾರತ ಅಭಿಯಾನ ಕೇಂದ್ರ ಸರ್ಕಾರ ಮಾಡುವ ಕಾರ್ಯಕ್ರಮವೇ..?? ಇದು ಕೆಲಸ ಮಾಡುತ್ತಿದೆಯೇ..?? ಎಂದಾಗ ವಿದ್ಯಾರ್ಥಿಗಳೆಲ್ಲರೂ ಜೋರಾಗಿ ಹೌದು ಎಂದು ಕೂಗಿದರು.. ವಿದ್ಯಾರ್ಥಿಗಳಿಗೆ ರಾಜಕೀಯದ ಬೀಜ ಬಿತ್ತಲು ಹೋದರೆ, ಅಥವಾ ದಾರಿ ತಪ್ಪಿಸುವ ಕೆಲಸ ಮಾಡ ಹೊರಟರೆ ಪರಿಣಾಮ ಏನಾಗುತ್ತದೆ ಎಂಬ ಸ್ಪಷ್ಟ ತಿಳುವಳಿಕೆ ನೀಡಿದ ಘಟನೆ ಇದು.. ಆದರೆ ಒಂದು ವಿಚಾರವನ್ನು ಹುಟ್ಟುಹಾಕುವ ಪ್ರಶ್ನೆ ಅದು.. ಸ್ವಚ್ಚ ಭಾರತ ಅಭಿಯಾನ ಮೋದಿ ಅವರ ನೇತೃತ್ವದಲ್ಲಿ ಕೆಲಸ ಸರಿಯಾಗಿ ಮಾಡುತ್ತಿದೆಯೇ ಎಂಬ ಪ್ರಶ್ನೆಗೆ ನಾನೂ ಹೌದು ಎಂದೇ ಉತ್ತರಿಸುತ್ತೇನೆ.. ಆದರೆ ಸ್ವಚ್ಚ ಭಾರತ ಅಭಿಯಾನ ಕೇಂದ್ರ ಸರ್ಕಾರ ಮಾಡುವ ಕಾರ್ಯಕ್ರಮವೇ..?? ಎಂಬ ಪ್ರಶ್ನೆ ಇದೆಯಲ್ಲ, ಅದಕ್ಕೆ ಉತ್ತರಿಸುವುದೇ ಕಷ್ಟ.. ಯಾಕೆಂದರೆ ಒಂದು ಸರ್ಕಾರ ದೇಶವನ್ನು ಸ್ವಚ್ಚವಾಗಿಡಲು ಒಂದು ಯೋಜನೆ ರೂಪಿಸುವ ಪರಿಸ್ಥಿತಿ ಬಂದಿದೆ ಎಂದಾಗ ಒಮ್ಮೆ ವಿಚಾರ ಮಾಡಲೇ ಬೇಕು.. ನಮ್ಮ ಕೆಲವು ಜವಾಬ್ದಾರಿಯನ್ನು ನಾವು ಮರೆತಿದ್ದೇವೆ ಎಂಬುದೇ ಅರ್ಥ.. ಇಲ್ಲಿ ನಾನು ಯಾವುದೇ ರಾಜಕೀಯದ ಅಥವಾ ರಾಜಕೀಯ ಪಕ್ಷದ ಪರ ಬ್ಯಾಟಿಂಗ್ ಮಾಡುತ್ತಿಲ್ಲ.. ಆದರೆ ನಮ್ಮೊಳಗಿನ ಸಮಸ್ಯೆಗಳ ಅರಿವು ಎಲ್ಲರಿಗೂ ಸರಿಯಾಗಿ ಆಗಿಲ್ಲ ಎನ್ನುತ್ತಿದ್ದೇನೆ.. ನಮ್ಮ ಜವಾಬ್ದಾರಿ ನಿರ್ವಹಣೆ ಇನ್ನೂ ಬೇಕು ಎಂಬುದು ನನ್ನ ಅಭಿಪ್ರಾಯ…

ಒಮ್ಮೆ ಎಲ್ಲ ರಾಜಕೀಯವನ್ನು ಬದಿಗಿಟ್ಟು ದೇಶ, ನಾವು ಮತ್ತು ನಮ್ಮ ಜವಾಬ್ದಾರಿ ಎಂದು ಯೋಚಿಸಿ ನೋಡಿ.. ಸುಂದರ ದೇಶ ನಮ್ಮ ಕನಸು, ಆ ಸುಂದರ ದೇಶ ಎಂದಿಗೂ ಸ್ವಚ್ಚವಾಗಿರಬೇಕು.. ಆದರೆ ಎಷ್ಟು ಊರುಗಳು, ಪೇಟೆಗಳು, ಪೇಟೆಯ ಗಲ್ಲಿಗಳು ಸ್ವಚ್ಚವಾಗಿದೆ..?? ಅದರ ಬಗ್ಗೆ ಮಾತನಾಡಿದರೆ ಮುನ್ಸಿಪಲ್’ಗೆ ಬೈಗುಳ ಸುರಿಸುವ ನಾವು ಎಷ್ಟು ಕಸವನ್ನು ಕಸದ ಬುಟ್ಟಿಗೆ ಹಾಕಿದ್ದೇವೆ..?? ಹೊರಗೆ ಹಾಕುವ ಕಸಗಳನ್ನು ಸರಿಯಾದ ಸ್ಥಿತಿಯಲ್ಲಿ ಮತ್ತು ಸರಿಯಾದ ಜಾಗದಲ್ಲಿ ಹಾಕಿದರೆ ಆಗ ಮುನ್ಸಿಪಲ್ ಕೆಲಸಗಾರರಿಗೂ ಸಹ ಸುಲಭವಲ್ಲವೆ..?? ಸುತ್ತ ಮುತ್ತ ಕಸದ ಡಬ್ಬಿ ಕಾಣದಿದ್ದರೆ ಕಸದ ಡಬ್ಬಿ ಸಿಗುವ ತನಕ ಕಾಣುವ ಕಸವನ್ನು ಹಿಡಿದುಕೊಳ್ಳುವ ತಾಳ್ಮೆ ನಮ್ಮಲ್ಲಿ ಇಲ್ಲ ಎಂದಾದರೆ ನಮಗೆ ಅವರನ್ನು ಬೈಯ್ಯುವ ಹಕ್ಕು ಇದೆಯೇ..?? ನಮ್ಮ ಸಹಕಾರ ಇಲ್ಲದೆ ಸ್ವಚ್ಚ ಭಾರತ ನಿರ್ಮಾಣ ಹೇಗೆ ಸಾಧ್ಯ…?? ನಾವು ಕಸವನ್ನು ಕಂಡಲ್ಲಿಯೇ ಬಿಸಾಡುವ ನಿರ್ಲಕ್ಷ್ಯವನ್ನು ಬಿಡಬೇಕು ಅಲ್ಲವೇ… ಆ ಜವಾಬ್ದಾರಿಯನ್ನು ನಿರ್ವಹಿಸುವತ್ತ ಸಾಗಬೇಕು..

ಇದು ಒಂದು ಸಣ್ಣ ಉದಾಹರಣೆ ಅಷ್ಟೇ.. ಇಂತಹ ಜವಾಬ್ದಾರಿಗಳು ಹಲವಾರಿದೆ.. ಮೊನ್ನೆ ಗೇಳೆಯನೊಬ್ಬ ದೇಶ ಉದ್ಧಾರವಾಗಬೇಕು ಅಥವಾ ದೇಶ ಉನ್ನತಿಯಾಗಬೇಕು ಎಂದರೆ ಆ ದೇಶದ ಸರ್ಕಾರ ಒಳ್ಳೆಯದಿರಬೇಕು, ದೇಶದ ನೂರಿಪ್ಪತ್ತು ಕೋಟಿ ಜನರಲ್ಲಿ ಬದಲಾವಣೆ ಉಂಟುಮಾಡುವದು ಬಹಳ ಕಷ್ಟ ಅದರ ಬದಲು MLA, MP ಗಳು ಬದಲಾದರೆ ದೇಶ ಬದಲಾಗುತ್ತೆ, ಸರ್ಕಾರ ಸರಿಯಿದ್ದರೆ ದೇಶ ಸರಿಯಾಗಿರುತ್ತೆ ಎನ್ನುತ್ತಿದ್ದ.. ನಿಜ ಆದರೆ ಭಾರತದಂಥ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರ್ಕಾರವನ್ನು ನಿರ್ಧರಿಸುವವರು ನಾವೇ ಅಲ್ಲವೇ..?? ಜಾಗೃತಿ ನಮ್ಮಲ್ಲಿ ಮೂಡಿದರೆ ದೇಶದಲ್ಲಿ ಮೂಡುತ್ತದೆ ಅಲ್ಲವೇ..?? ನಾವು ಮತಹಾಕಿ ಕಳುಹಿಸಿದವ ಕೆಲಸ ಉತ್ತಮವಾಗಿ ಮಾಡದಿದ್ದರೆ ತಪ್ಪು ನಮ್ಮದೇ ಅಲ್ಲವೇ.. ಆ ನಿಟ್ಟಿನಲ್ಲಿ ಒಂದು ಚಿಂತನೆ ಮಾಡುವುದು ಅತ್ಯಂತ ಅವಶ್ಯಕವಾದುದು ಎಂಬುದು ನನ್ನ ಅಭಿಪ್ರಾಯ..

ಆದರೆ ಆ ಬದಲಾವಣೆ ಅಷ್ಟು ಸುಲಭ ಅಲ್ಲ.. ಕೇವಲ ನಮ್ಮಲ್ಲಿ ಆ ಬದಲಾವಣೆ ಬಂದರೆ ಸಾಲದು ಸುತ್ತಮುತ್ತಲಿನ ಪರಿಸರದಲ್ಲೂ ಅದು ಮೂಡಲೇಬೇಕು.. ಕೆಲವು ದಿನಗಳ ಹಿಂದೆ ವೃದ್ಧರೊಬ್ಬರು ರಿಕ್ಷಾ ನಿಲ್ದಾಣದ ಕಡೆ ಹೋಗುತ್ತಿದ್ದರು. ಅವರು ಎಲ್ಲಿಗೋ ಹೋಗುವ ತರಾತುರಿಯಲ್ಲಿ ಇದ್ದವರು.. ಆ ಇಳಿವಯಸ್ಸಿನಲ್ಲೂ ನಡೆಯುತ್ತಿದ್ದ ವೇಗವನ್ನು ನೋಡಿದರೆ ಯಾವುದೋ ಮುಖ್ಯವಾದ ಕೆಲಸದಲಿ ಇದ್ದರು ಎಂಬುದನ್ನು ಹೇಳಬಹುದೇನೋ.. ರಿಕ್ಷಾ ನಿಲ್ದಾಣ ಒಂದು ಐವತ್ತು ಮೀಟರ್ ದೂರವಿದ್ದಿರಬಹುದು ಅಷ್ಟರಲ್ಲಿ ಅದೇ ದಾರಿಯಲ್ಲಿ ಹೋಗುತ್ತಿದ್ದ ಒಂದು ಆಟೋದೆಡೆಗೆ ಸನ್ನೆ ಮಾಡಿದರು, ಆಟೋದವ ಸ್ವಲ್ಪ ಮುಂದೆ ಹೋಗಿ ನಿಲ್ಲಿಸಿದ, ಆದರೆ ಇವರಿಗೆ ಅಲ್ಲಿಯವರೆಗೆ ಹೋಗಲು ಸ್ವಲ್ಪ ಸಮಯ ಹಿಡಿಯಿತು, ಅಷ್ಟರಲ್ಲಿ ಆ ಆಟೋದವ ಹೊರಟುಬಿಟ್ಟ, ತಿರುಗಿ ಆಟೋ ನಿಲ್ದಾಣಕ್ಕೆ ಬಂದ ಅವರು ಸರತಿ ಸಾಲಿನಲ್ಲಿ ಎದುರು ಇದ್ದ ಆಟೋ ಹತ್ತಿ ವಿಳಾಸ ಹೇಳಿದರು, ಆದರೆ ಆಟೋದವ ಬರಲು ನಿರಾಕರಿಸಿದ, ಅದಕ್ಕೆ ಆತ ನೀಡಿದ ಕಾರಣ ಅವರು ರಸ್ತೆಯಲ್ಲಿ ಹೋಗುತ್ತಿದ್ದ ಆಟೋಗೆ ಕೈ ಮಾಡಿ ನಿಲ್ಲಿಸಿದ್ದರು ಎಂಬುದು.. ಇದೇ ರೀತಿಯ ಘಟನೆ ಹಲವು ಜನರಿಗೆ, ಹಲವು ರೀತಿಗಳಲ್ಲಿ ಆಗಿರಬಹುದು.. ಇಲ್ಲಿ ನನ್ನ ಪ್ರಶ್ನೆ ಇಷ್ಟೇ.. ಯಾವುದಾದರೂ ತುರ್ತು ಕೆಲಸದ ನಿಮಿತ್ತ ಹೊರಟಾಗ ಅಥವಾ ರೋಗಿಯನ್ನು ಆಸ್ಪತ್ರೆಗೆ ಸೇರಿಸುವ ಪರಿಸ್ಥಿಯಲ್ಲಿ ಇರುವಾಗ ಈ ರೀತಿ ಪರಿಸ್ಥಿತಿ ಎದುರಾದರೆ..?? ನಮ್ಮ ಕೆಲಸದ ಜೊತೆ ಸಾಮಾಜಿಕ ಕಳಕಳಿ ಸಹ ಬೇಕಲ್ಲವೆ..??

ಸಮಾಜ ಸುಂದರವಾಗಿರಲು ದೊಡ್ಡ ಚಳುವಳಿ ಮಾಡಬೇಕಿಲ್ಲ, ಅದನ್ನು ನಮ್ಮ ಸ್ವಾರ್ಥದಿಂದಲೇ ಸಾಧಿಸಬಹುದು.. ನಮ್ಮ ಮನಸ್ಸು ಸ್ವಲ್ಪ ಬದಲಾಯಿಸಿಕೊಂಡರೆ ಸಾಕು.. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡರೆ ದೇಶ ಸ್ವಚ್ಚವಾಗುತ್ತೆ, ನಮ್ಮ ಸುತ್ತಮುತ್ತಲಿನ ಜನರ ಜೊತೆ ಆತ್ಮೀಯರಾಗಿದ್ದರೆ ಎಲ್ಲರೂ ಸ್ನೇಹಿತರೇ, ನಮ್ಮ ನಮ್ಮ ಕರ್ತವ್ಯದಲ್ಲಿ ನಿಷ್ಠರಾಗಿದ್ದಾರೆ ವ್ಯವಸ್ಥೆ ಸರಿಯಾಗುತ್ತೆ, “ದೇಶ್ ಬದಲ್’ನೇ ಕೇ ಲಿಯೇ ಸೋಚ್ ಬದಲ್’ನಾ ಚಾಹಿಯೇ, ಸೋಚ್ ಬದಲ್’ನೇ ಕೇ ಲಿಯೇ ಹಮ್ ಬದಲ್’ನಾ ಚಾಹಿಯೇ” ಎಂದು ಮೋದಿ ಒಂದು ಭಾಷಣದಲ್ಲಿ ಹೇಳುತ್ತಾರೆ.. ಅಂದರೆ ದೇಶ ಬದಲಾಗಬೇಕೆಂದರೆ ವಿಚಾರಗಳು, ಚಿಂತನೆಗಳು ಬದಲಾಗಬೇಕು, ವಿಚಾರಗಳು ಬದಲಾಗಬೇಕೆಂದರೆ ನಾವು ಬದಲಾಗಬೇಕು ಎಂದರ್ಥ.. ನಿಜವಾದ ಮಾತು ಎಂದೆನಿಸುತ್ತೆ.. ಬದಲಾವಣೆ ಆಗಬೇಕೆಂದರೆ ನಾವು ಬದಲಾಗಬೇಕು..

I am the change ಎಂದು ಸಾರುವ ಯೂ ಟ್ಯೂಬ್ ವೀಡಿಯೋಗಳನ್ನು ನೋಡಿ ಲೈಕ್ ಒತ್ತಿದರೆ ನಮ್ಮ ಜವಾಬ್ದಾರಿ ಮುಗಿಯಲಾರದು.. I am the change ಎಂದು ಸಾಬೀತುಪಡಿಸಲೇಬೇಕು.. ಸಮಸ್ಯೆ ಇದೆ ಎಂದು ಹೇಳುವುದು ಮಾತ್ರ ನಮ್ಮ ಕರ್ತವ್ಯ ಅಲ್ಲ.. ಅದನ್ನು ನಿವಾರಿಸುವ ಬಗೆಯ ಕಡೆ ಹೆಜ್ಜೆ ಇದಬೇಕಾದ್ದು ನಮ್ಮೆಲ್ಲರ ಕರ್ತವ್ಯ.. ವಿಶ್ವಗುರು ಆಗುವತ್ತ ಹೊರಟಿದೆ ಭಾರತ, ಜಗತ್ತು ಭಾರತದೆಡೆಗೆ ತಿರುಗಿ ನೋಡುತ್ತಿದೆ.. ಜೊತೆಗೆ ಸುಂದರ ಭಾರತ ಕಟ್ಟುವ ಕನಸಿದೆ.. ಅದಕ್ಕೆ ಅಲ್ಪ ಬದಲಾವಣೆ ನಮ್ಮಲ್ಲಿ ಮತ್ತು ನಮ್ಮ ಸುತ್ತ ಮುತ್ತ ಆಗಬೇಕಿದೆ.. ಗಣರಾಜ್ಯೋತ್ಸವದ ಬರುತ್ತಿರುವ ಈ ಸಂದರ್ಭದಲ್ಲಿ ಇವೆಲ್ಲ ಚಿಂತನೆಗಳನ್ನು ನಮ್ಮ ಒರೆಗೆ ಹಚ್ಚಿ ವಿಚಾರ ಮಾಡುವುದು ತುಂಬಾ ಮುಖ್ಯವಾದದ್ದು… ಬೆಳಗಲಿ ದೇಶ.. ಬದಲಾಗಲಿ ಸಮಾಜ, ಆ ಬದಲಾವಣೆ ನಮ್ಮಿಂದಲೇ ಆಗಲಿ…

-ಮಂಜುನಾಥ ಹೆಗಡೆ

Posted in ನಮ್ಮ ಮಾತು | Tagged , , | Leave a comment

ಪ್ರೇಮ ಪುರಾಣ – 3

ಭಾಗ–1: https://jagaliblog.wordpress.com/2015/11/28/prema_purana_1/
ಭಾಗ–2: https://jagaliblog.wordpress.com/2015/12/10/prema_purana_2/

12510374_805561912883704_1370153576082534114_n

ಮುಂದುವರಿದ ಭಾಗ..

ಮೊಬೈಲ್ ನಂಬರ್ ಏನೋ ಸಿಕ್ತು. ಆದ್ರೆ ಹೇಗೆ ಒಂದೇ ಸಲಕ್ಕೆ ಕರೆ ಮಾಡಿ ಮಾತನಾಡಲಿ? ಅಥವಾ ಬರೀ ಸಂದೇಶ ಕಳಿಸಲಾ? ಗೊತ್ತಾಗಲಿಲ್ಲ. ನೋಡೋಣ,ಅವಳೇ ಸಂದೇಶ ಕಳಿಸಬಹುದೆಂದು ಒಂದೆರಡು ದಿನ ಕಾದೆ. ಆದ್ರೆ ಏನೂ ಪ್ರಯೋಜನ ಆಗ್ಲಿಲ್ಲ.

ಮೊದಲನೇ ಪ್ರೀತಿ ಪ್ರಸಂಗದಲ್ಲಿ ಹುಡುಗ್ರು ಮನಃಸ್ಥಿತಿನೇ ಹಾಗೆ. ನಂಬರ್ ಸಿಕ್ಕಿದ ತಕ್ಷಣ ಅವಳೊಂದಿಗೆ ಮಾತನಾಡಬೇಕು ಅಂತ. ಆದ್ರೆ, ಹುಡುಗಿಯರು ಹಾಗಲ್ಲ, ನಂಬರ್ ಕೊಟ್ಟಿದ್ದೀನಲ್ಲ, ಅವನೇ ಸಂಪರ್ಕಿಸಲಿ ಅಂತ ಕಾಯ್ತಾ ಇರ್ತಾರೆ.

ನಾನು ಏನು ಮಾಡಬೇಕೆಂದೇ ತೋಚಲಿಲ್ಲ. ಸುಮ್ನೇ ಶುಭೋದಯ ಅಂತ ಸಂದೇಶ ಕಳುಹಿಸಲಾ? ಅಷ್ಟೆಲ್ಲಾ ಪರಿಚಯ ಆದ್ರೂ ಇವ್ನೇನು ಬರೀ ಸಂದೇಶ ಕಳಿಸ್ತಾನಲ್ಲ ಅಂತ ಅವಳಂದುಕೊಳ್ತಾಳೆ ಅಂತ ಅನ್ನಿಸ್ತು. ಕರೆ ಮಾಡೋಣವೆ ಅಂತ ಅಂದುಕೊಂಡ್ರೆ ನಾನೆಂತ ಹುಡುಗನೋ ಅಂತ ಅವಳು ತಪ್ಪು ತಿಳಿದುಕೊಳ್ತಾಳೋ ಅನ್ನೋ ಹೆದರಿಕೆ.

ಹುಡುಗ್ರು ಹಣೇ ಬರಹನೇ ಇಷ್ಟು, ಬರೀ ಹೆದರ್ಕೊಂಡೇ ಇರೋದಾಯ್ತು. ಏನಾದರಾಗಲೀ ಕರೆ ಮಾಡಿಯೇ ಬಿಡೋಣ ಅಂತ ಧೈರ್ಯ ತಂದ್ಕೊಂಡೆ. ಕರೆ ಮಾಡಿಯೇ ಬಿಟ್ಟೆ.

ಅವಳು ಕರೆಯನ್ನ ಸ್ವೀಕರಿಸಿದ್ಲು. ನಾನು ಒಮ್ಮಲೇ ತಡವರಿಸಿದೆ, ಹೇಗೆ-ಏನನ್ನ ಮಾತನಾಡೋದು ಅಂತ.

‘ಆರಾಮಾ..??’

ಅದೇ ಇಂಪಾದ ಧ್ವನಿ ಕಿವಿಗೆ ಬಿತ್ತು; ನನ್ನ ಮಾತು ನಿಂತೇ ಹೋಯ್ತು.

ಅದೂ ಇದೂ ಅಂತ ತುಂಬಾ ಮಾತಾಡಿದ್ವಿ ಅವತ್ತು ನಾನೂ ಅವಳೂ. ನಂಗಂತೂ ಈ ಭೂಮಿ ಮೇಲೆ ಎಲ್ಲೇ ನೋಡಿದ್ರೂ ಅವ್ಳೇ ಕಾಣತೊಡಗಿದಳು. ನನ್ನ ಅವತ್ತಿನ ಎಲ್ಲಾ ಕೆಲಸಗಳೂ ಹಾಳು ಬಿದ್ದವು; ಅಷ್ಟೊತ್ತು ಮಾತನಾಡಿದೆವು ಅಂದು.

ಅವಳ ಆ ನಗು, ಮಾತಿನ ಮಧ್ಯ ನನ್ನ ಮಾತು ಅರ್ಥ ಆಗ್ದೇ ಇದ್ದಾಗ ಅವಳು ‘ಅಂ’ ಅಂತ ಹೇಳ್ತಾ ಇದ್ದಿದ್ದು, ‘ಓಹೋ’ ಅಂತ ಉದ್ಗಾರ ಮಾಡ್ತಿದ್ದಿದ್ದು ಎಲ್ಲಾ ತಲೆಯೊಳಗೆ ಗುನುಗುಡ್ತಾ ಇದ್ದವು, ಇಡೀ ದಿನ ಅದರ ಗುಂಗಲ್ಲೆ ಇದ್ದೆ ನಾನು.

ಈ ತರದ ಮಾತುಕತೆ, ನಗು, ಸಿಹಿ ಸಂದೇಶಗಳಲ್ಲೇ ತಿಂಗಳುಗಳೇ ಕಳೆದು ಹೋದವು. ಆದರ ಮಧ್ಯದಲ್ಲಿ ಒಂದು ದಿನ ಅವಳಾಗೇ ನನ್ನ ಜವಾಬ್ದಾರಿಗಳ ಬಗ್ಗೆ ಎಚ್ಚರಿಸಿದ್ಲು..

ಆಗಲೇ ನೆನಪಾಗಿದ್ದು ನನಗೆ ನನ್ನ ಜವಾಬ್ದಾರಿಗಳು. ಜವಾಬ್ದಾರಿಗಳ ಬಗ್ಗೆ ನಾನು ಯೋಚಸಲೇ ಬೇಕಾಯ್ತು. ನನ್ನ ಆ ಜವಾಬ್ದಾರಿಗಳು ಅದೊಂದು ಮುಗಿಯದ ಕಥೆ, ಅಲ್ಲ ವ್ಯಥೆ.

ಆದ್ರೂ ಇದರ ನಡುವೆ ಸಂತೋಷ ಕೊಟ್ಟಿದ್ದು ಇಷ್ಟೇ, ಅವಳಿಗೆ ಈಗಲೇ ನನ್ನ ಮೇಲೆ ಎಷ್ಟೊಂದು ಕಾಳಜಿ ಅಂತ….

ಈಗ್ಲೇ ಹೀಗೆ ಇನ್ನು ಮದುವೆಯಾದ್ರೆ? ಕನಸು ಕಾಣತೊಡಗಿದೆ..

ಮುಂದುವರೆಯುವುದು…

-ಗಿರೀಶ್ ಭಟ್ ಬಿಕೆ

Posted in ಕಥಾಸರಣಿ, ಪ್ರೇಮ ಪುರಾಣ | Tagged , | Leave a comment