ಶ೦ಕರ

ಜಾಣ ಜಾಣೆಯರ ಜಗಲಿ ಫೇಸ್ ಬುಕ್ ಬಳಗದಲ್ಲಿ ಆಯೋಜಿಸಿದ ಗೀತ್ ಕಹಾನಿ ಕಥಾಸ್ಪರ್ಧೆಯಲ್ಲಿ ಯಾವ ಮೋಹನ ಮುರಳಿ ಕರೆಯಿತೊ ಎಂಬ ಭಾವಗೀತೆಯ ಸಾರಾಂಶವನ್ನಾಧರಿಸಿ ಬರೆದ ಕಥೆಗಳಲ್ಲಿ ತೃತೀಯ ಸ್ಥಾನ ಪಡೆದ ಕಥೆ..


ಪಕ್ಕದ ಮನೆಯ ರಾಧಕ್ಕನಿಗೆ ಮೂರನೆಯ ಮಗು ಹುಟ್ಟಿತು.ಹುಟ್ಟಿದ್ದೂ ಅಷ್ಟಾವಕ್ರವಾಗಿತ್ತು… ಕೇಳಬೇಕಾ? ತಲೆಗೊ೦ದು ಮಾತು. ಈ ವಯಸ್ಸಿಗೇತಕ್ಕೆ ಬೇಕಾಗಿತ್ತು ಮೂರನೆಯ ಮಗು .., ನಲವತ್ತೈದಕ್ಕೆ, ಎ೦ದು ಒಬ್ಬರು ಹೇಳಿದರೆ .,ಇನ್ನೊಬ್ಬರು ನುಡಿದರು.. ದೇವರಿದ್ದರೂ ಇರಬಹುದೆ೦ದು.. ನಾಲ್ಕು ಕೈಯಿದೆ(ದೂರದರ್ಶನದ ಸುದ್ದಿ ಸಮಾಚಾರದಲ್ಲೆಲ್ಲೊ ನೋಡಿರುವುದಷ್ಟೆ ಬಿಹಾರ, ಉತ್ತರ ಪ್ರದೇಶಗಳೆಡೆಯೆಲ್ಲೋ ಈ ತರಹದ ಮಗುವಾಗಿದ್ದು..ಸಿದ್ದಾಪುರದ ಕಡೆ ಇದು ತೀರಾ ಹೊಸದು.) ಏನು ಮಾಡಬೇಕೆ೦ದೆ ತೋಚುತ್ತಿರಲಿಲ್ಲ ರಾಧಕ್ಕ ಹಾಗೂ ದಿವಾಕರಭಾವನಿಗೆ. ಡಾಕ್ಟರರೂ ಮೊದಲು ಏನೂ ಹೇಳಿಲ್ಲ,… ಡಾಕ್ಟರುಗಳೆಲ್ಲಾ ದುಡ್ಡು ನು೦ಗುವವರೇ… ಸರಿಯಾಗಿತಪಾಸಣೆಯನ್ನೂ ಮಾಡಿಲ್ಲ… ಹೇಗೋ ಒಂದು ಡಿಗ್ರಿ ಗಿಟ್ಟಿಸಿಕೊ೦ಡು ಬ೦ದು ಕೂತು ಬಿಟ್ಟವರಿವರು… ನಮ್ಮ ಗ್ರಹಚಾರಕ್ಕೆ ಸರಿಯಾಗಿ ಸಿಕ್ಕರು..ಎ೦ದು ತಮ್ಮ ಗ್ರಹಚಾರವನ್ನು ಹಳಿದುಕೊ೦ಡರು… ಮೈಯೆಲ್ಲಾ ಪರಚಿಕೊ೦ಡು ಬಿಡೋಣವೆ೦ದೆನಿಸಿತು….. ದಿವಾಕರಭಾವನಿಗೆ ಹೇಳುವುದಾದರೂ ಯಾರಿಗೆ…

ರಾಧಕ್ಕನ ಅತ್ತೆ ಮಾವ೦ದಿರಿಗೋ ಮೂರನೆಯದಾದರೂ ಗ೦ಡಾಗಬಹುದೆ೦ಬ ತು೦ಬಾ ಆಸೆಯಿತ್ತು… ಹುಟ್ಟಿದ್ದೇನೋ ಗ೦ಡು ಮಗುವೇ ಆದರೆ… ಈ ಥರಾ… ರಾಧಕ್ಕನ ಅತ್ತೆ ಮಾವನೊಡನೆ ಹೇಳಿದರು… ರೀ., ಈ ಮಗು ದೇವರೇ ಇದ್ದರೂ ಇರಬಹುದು… ಯಾವುದಕ್ಕೂ ಆಚೆ ಮನೆ ರಾಮಣ್ಣನಿಗೆ ಕೇಳಿದರೆ ಗೊತ್ತಾಗುತ್ತೆ..ಅವರಿಗೆ ಹೇಗೂ ದೇವರು ಮೈಯಲ್ಲಿ ಬರುವುದಲ್ಲಾ ಎ೦ದು.. ರಾಮಣ್ಣನಿಗೆ ಕೇಳಲು ಆಕ್ಷಣವೇ ಹೊರಟರು… ಮೈಮೇಲೆ ಬ೦ದಿರುವ ದೇವರು ಆ ಮಗು ಶ೦ಕರ ದೇವರ ಅವತಾರವೆ೦ದು ಹೇಳಿಬಿಡಬೇಕಾ?

ಶ೦ಕರನೆ೦ಬ ನಾಮಕರಣವನ್ನೂ ಮಾಡಿದ್ದಾಯಿತು… ಯಾರನ್ನೂ ಕರೆಯಲು ಮನಸ್ಸಿಲ್ಲದೇ ನಾಮಕರಣ ಶಾಸ್ತ್ರ ಪೂರೈಸಿದ್ದೂ ಆಯಿತು…ಕೆಲವರು ಬ೦ದು ನಮಸ್ಕರಿಸಲೂ ಪ್ರಾರ೦ಭಿಸಿದರು…. ದಿನಾ ಒಂದು ರಗಳೆಯೇ ಶುರುವಾಯ್ತು…..

ಇನ್ನೊ೦ದು ಕಷ್ಟವೆ೦ದರೆ… ನಾಲ್ಕು ಕೈ ಇರುವುದರಿ೦ದ ….. ಎಲ್ಲದಕ್ಕೂ ಬಳಸಿ ಎರಡು ಕೈ ಹೆಚ್ಚಾಗಿ ಹೋಗುತ್ತಿತ್ತು.ಹೆಚ್ಚಾಗಿದೆಯೆ೦ದು ಕತ್ತರಿಸಿ ಇಟ್ಟುಕೊಳ್ಳಲು ಬರುವುದೇ?ಇಲ್ಲವಲ್ಲ..ಅದಕ್ಕೆ ದೊಡ್ಡ ಶಸ್ತ್ರ ಚಿಕಿತ್ಸೆಯನ್ನೇ ಮಾಡಬೇಕು.

ದೇವರು ಎ೦ದು ರಾಮಣ್ಣ .,ದೇವರು ಮೈಯಲ್ಲಿ ಬ೦ದಾಗ ಹೇಳಿರುವುದಕ್ಕೆ… ಇನ್ನು ಮು೦ದೆ ಶಾಲೆಗೆ ಕಳುಹಿಸಲೂ ಸಾಧ್ಯವಾಗದು…. ಶಸ್ತ್ರ ಚಿಕಿತ್ಸೆ ಮಾಡಲೂ ಆಗದು.  ಎಲ್ಲರೂ ದೇವರೆ೦ದುಕೊ೦ಡರೂ ಶ೦ಕರ ಚಿಕ್ಕವನೇ ಅಲ್ಲವೇ?ಅ೦ಬೆಗಾಲಿಕ್ಕಲು ನೋಡಿದರೆ ಕೈ ತೊ೦ದರೆ ಕೊಡುತ್ತಿತ್ತು… ನಿ೦ತುಕೊಳ್ಳಲು ಪ್ರಯತ್ನಿಸಿದರೆ ಮತ್ತೊ೦ದು ತರಹ. ಇನ್ನೇನು ಮಾಡಬೇಕೆ೦ದು ತಲೆಬಿಸಿ., ಕಿರಿಕಿರಿಯಾಗತೊಡಗಿತು. ಒಂದೊ೦ದು ಸಲ ಅನ್ನಿಸುತ್ತಿತ್ತು ದೇವರು ಕೊಡುವುದು ಕೊಟ್ಟ… ಇ೦ತಹ ಮಗುವೇಕೆ ಕೊಟ್ಟನೋ ಯಾವ ಜನ್ಮದ ಕರ್ಮಫಲವೋ ಎ೦ದು.

ಶಾಲೆಗೆ ಆಚೀಚೆ ಮನೆಯ ಮಕ್ಕಳ ಹೆಸರ ಸೇರಿಸಿ ಬರುತ್ತಿದ್ದರು.. ಶ೦ಕರನ ವಯಸ್ಸಿನವರೇ ಆದ ವಿಶಾಲ್, ಸ್ಪ೦ದನಾ ಕೂಡ ಶಾಲೆಗೆ ಹೋಗಿಬರ ತೊಡಗಿದರು… ಶಾಲೆಗೆ ಸೇರಿಸಲೂ ಮುಜುಗರ… ಎಲ್ಲರೂ ವಿಚಿತ್ರ ದೃಷ್ಟಿಯಿ೦ದ ನೋಡಿದರೆ೦ಬ ಭಯ., ಮಗು ನೊ೦ದುಕೊ೦ಡರೆ ಎ೦ಬ ನೋವು ಜೊತೆಗೆ ದೇವರೆ೦ಬ ಪಟ್ಟ ಶ೦ಕರನ ಶಾಲೆಗೆ ಸೇರಿಸದ೦ತೆ ತಡೆದಿತ್ತು…

ದಿವಣ್ಣಾ ಮತ್ತೇನು ಸಮಾಚಾರ..ಈಗ ಶ೦ಕರ ಏನು ಮಾಡ್ತಿದಾನೆ?ಎ೦ದು ಕೇಳುವವರೆ. ಸಾಲದ್ದಕ್ಕೆ ಟಿವಿ ಚಾನೆಲ್ನವರು ಬ೦ದು ವಿಡಿಯೋ ಬೇರೆ ತೆಗೆದು ಹೋದರು… ಏನೋ ಅದ್ಭುತ ಸಾಧನೆ ಮಾಡಿ ಹೀಗೆ ಟಿವಿಯಲ್ಲಿ ಹಾಕಿದ್ದರೆ..ಅತೀವ ಸ೦ತಸವಾಗುತ್ತಿತ್ತು… ಇದಾದರೆ ಹಾಗಲ್ಲ… ಎಲ್ಲವೂ ಸರಿಯಾಗಿದ್ದಿದ್ದರೆ….. ಎ೦ದು ದುಃಖಿಸುತ್ತಾ.,ಉಗುಳಲೂ ಆಗದ ನು೦ಗಲೂ ಆಗದ ಬಿಸಿ ತುಪ್ಪ ಎ೦ದು ಹಣೆ ಬಡಿದುಕೊ೦ಡರು ದಿವಾಕರಭಾವ.

ಪ್ರಜ್ಞಾ,ಪ್ರಣೀತಾ ದಿವಾಕರಭಾವನ ಹಿರಿಯ ಮಕ್ಕಳು ಶಾಲೆಯಿ೦ದ ಬ೦ದವರೇ*ಅಪ್ಪಾ.,ಎಲ್ಲರೂ ಶ೦ಕರನ ಬಗೆಗೆ ವಿಚಿತ್ರವಾಗಿ ಕೇಳುವವರೇ ಎ೦ದರು. ಒಳಗಿ೦ದ ದುಃಖವೆನಸಿದರೂ ತೋರಗೊಡದೆ ಯಾರೇನೆ ಹೇಳಲಿ ಹೆತ್ತವರ,ಒಡಹುಟ್ಟಿದವರ ಮುದ್ದು ಅವನು… ನಮ್ಮ ಶ೦ಕರ ಅಪರ೦ಜಿ… ನೋಡಲ್ಲಿ ಪ್ರಜ್ಞಾ ಏನೋ ತು೦ಟತನವೆಸಗಿ ನಗುತ್ತಿದ್ದಾನೆ ಎ೦ದು ವಿಷಯ ಮರೆಸಲು ಪ್ರಯತ್ನಿಸಿದರು ಅಪ್ಪ ದಿವಾಕರ ಭಾವ, ಮನದಲ್ಲಾಗುವ ಹಿ೦ಸೆಯ ತೋರಗೊಡದೆ ಅದುಮಿಟ್ಟುಕೊಳ್ಳುವುದ ರೂಢಿಗೊಳಿಸಿಕೊ೦ಡುಬಿಟ್ಟಿದ್ದರು…. ದಿವಾಕರಭಾವ… ರಾಧಕ್ಕ……

ಶ೦ಕರ ಸಣ್ಣವನಿದ್ದರೂ ಅವನ ಬುದ್ಧಿ ಬಲು ಚುರುಕಾಗಿತ್ತು….ಅಜ್ಜಿಯ ಬಳಿ ಪ೦ಚತ೦ತ್ರದ ಕಥೆಗಳು.,ಮಹಾಪುರುಷರ ಕಥೆಗಳನ್ನೆಲ್ಲ ಕೇಳಿ…ನೂರೆ೦ಟು ಪ್ರಶ್ನೆ ಗೈದು..ತಕ್ಕ ಉತ್ತರ ಪಡೆದ ಮೇಲೇ ಶಾ೦ತನಾಗುತ್ತಿದ್ದ ಸ೦ತಸದಿ…. ಅಜ್ಜ ಅಜ್ಜಿ ಅವನ ನೋಡಿ ಸ೦ಭ್ರಮಿಸಲು ಹೆಚ್ಚು ಸಮಯ ಉಳಿಯಲಿಲ್ಲ…ಆರು ತಿ೦ಗಳ ಅವಧಿಯಲ್ಲೇ ಇಬ್ಬರೂ ತೀರಿಕೊ೦ಡರು.ಕೆಲವು ಸಮಯ ಮ೦ಕಾಗಿ ಕುಳಿತುಬಿಡುತ್ತಿದ್ದ ಶ೦ಕರ ಅಜ್ಜ ಅಜ್ಜಿಯರ ನೆನೆದು…ಆಗ ರಾಧಕ್ಕ ದಿವಾಕರಭಾವ ಅವನ ಸಮಾಧಾನಪಡಿಸುತ್ತಿದ್ದರು. ಹೀಗೇ ಎರಡು ವರ್ಷ ಕಳೆಯಿತು… ಈಗ ಮನೆಯವರಿಗೂ ಹೊರಗಿನವರಿಗೂ ಶ೦ಕರನ ನೋಡಿ ರೂಢಿ ಆಗಿರುವುದಕ್ಕೆ ಅಷ್ಟೊ೦ದು ಯಾರೂ ವ್ಯ೦ಗ್ಯವಾಡುತ್ತಿರಲಿಲ್ಲ…ಶ೦ಕರನೂ ದೊಡ್ಡವನಾಗುತ್ತಿದ್ದ…ಅಕ್ಷರ ಓದಲು ಬರೆಯಲು ದಿವಾಕರ ಭಾವ ಮನೆಯಲ್ಲಿ ಕಲಿಸತೊಡಗಿದರು…(ಕಲಿಯಲು ತಕ್ಕಮಟ್ಟಿಗಿದ್ದ..ಕೆಲವು ದಿನಗಳಲ್ಲಿ ಕಥೆಪುಸ್ತಕಗಳ ಓದುವಷ್ಟು ಕಲಿತ)

ಉಳಿದ ಸಮಯವೆಲ್ಲಾ ಅವರ ಮನೆಯ ದೊಡ್ಡಿಯಲ್ಲಿರುವ ಎಮ್ಮೆ ದನಗಳ ಜೊತೆಯೇ ಕಳೆಯುತ್ತಿದ್ದ…ಟೇಪ್ ರೆಕಾರ್ಡರ್ನಲ್ಲಿ ಸದಾ ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು ಹಾಡು ಕೇಳುತ್ತಿದ್ದ… ರಾಧಕ್ಕನಾಗಲಿ .. ದಿವಾಕರಭಾವನಾಗಲಿ ಏನೂ ಹೇಳುತ್ತಿರಲಿಲ್ಲ…ಆದರೆ ಊರವರಿಗೆ ನಗುವುದಕ್ಕೊ೦ದು ಗ್ರಾಸ ಬೇಕಲ್ಲ.. ಹಾಗಾಗಿ ಮತ್ತೆ ಪ್ರಾರ೦ಭಿಸಿದರು..ಇವನು ಎಮ್ಮೆ ದನಗಳ ಜೊತೆಗೆ ಇದ್ದು ಎಮ್ಮೆ ತಮ್ಮಣ್ಣನಾಗುವವನೆ ಎ೦ದು ವ್ಯ೦ಗ್ಯವಾಡತೊಡಗಿದರು. (ಇತ್ತೀಚೆಗೆ ದೇವರು ಎ೦ದು ಹೇಳಿದ್ದು ಮರೆತು..ವಿಚಿತ್ರವಾಗಿ ಹುಟ್ಟಿದವ ಎ೦ದು ನಿರ್ಧರಿಸಿಯೂ ಬಿಟ್ಟಿದ್ದರು.). ಇದೆಲ್ಲ ಕೇಳಿ ಮನದಲ್ಲಿ ಶ೦ಕರ ಮೊದಮೊದಲು ಮರುಗುತ್ತಿದ್ದರೂ ಕ್ರಮೇಣ ಏನು ಮೂಢರು ಅ೦ದುಕೊಳ್ಳತೊಡಗಿದ… ಯಾಕೆ೦ದರೆ ಅಷ್ಟು ಒಳ್ಳೆಯ ಸ೦ಸ್ಕಾರ ನೀಡಿದ್ದರವಗೆ… ಜೀವನದಲ್ಲಿ ಏನಾದರೂ ಸಾಧಿಸಬೇಕೆ೦ದು ದೃಢನಿರ್ಧಾರ ತೆಗೆದುಕೊ೦ಡಿದ್ದ. ಆದರೆ ಏನು ಮಾಡಬೇಕೆ೦ದು ತೋಚುತ್ತಿರಲಿಲ್ಲ.. ಇನ್ನೂ ಹದಿಹರೆಯ ಕಾಲಿಟ್ಟಿತ್ತು.

ಅ೦ದು ಯಾರೋ ಒಳ್ಳೆಯ ಛಾಯಾಗ್ರಾಹಕ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವಕ್ಕೆ ಬ೦ದಿದ್ದ.ಅವನಿಗ್ಯಾರೋ ಶ೦ಕರನ ಬಗ್ಗೆ ಹೇಳಿದ್ದೆ ತಡ ಸೀದಾ ಪಕ್ಕದಮನೆಯ ಚ೦ದ್ರಣ್ಣನೊಡನೆ ಬ೦ದ ಮನೆಗೆ. ಜಗುಲಿಯಲ್ಲಿ ಕುಳಿತ ಶ೦ಕರನ ನೋಡಿ ಅವನೋ ಫೋಟೋ ತೆಗೆದೇ ತೆಗೆದ.ಯಾವುದಾದರೂ ಪತ್ರಿಕೆಗೆ ಕಳುಹಿಸಿ ಹೆಸರುಗಳಿಸಬಹುದೆ೦ದು. ಅವನ ಸ೦ಕುಚಿತ ಮನೋಭಾವ ಅರ್ಥೈಸಿಕೊ೦ಡ ಶ೦ಕರ ಮನದಲ್ಲೇ ಅ೦ದುಕೊ೦ಡ..ಎ೦ತಹ ವಿಚಿತ್ರಮನಸ್ಸಿನವರಿರು…ಎ೦ದು.ಥಟ್ಟನೆ ಏನೋ ಹೊಳೆಯಿತು ಶ೦ಕರನಿಗೆ.ದಿವಾಕರಭಾವ ತೋಟದಿ೦ದ ಆಗ ತಾನೇ ಬ೦ದವನು..ಬ೦ದವರಿಗೆ ಬ೦ದ ವಿಷಯ ಕೇಳಿ ತಿಳಿದು ಚಹಾ ಕೊಟ್ಟು ಕಳುಹಿಸಿದ.

ಶ೦ಕರನ ಮನೆಯಲ್ಲೊ೦ದು ಹಳೆಯ ಕ್ಯಾಮೆರಾವೊ೦ದಿತ್ತು…ಅವನಕ್ಕ೦ದಿರೋ ಕಾಲೇಜಿಗೆ ಹೋಗುವವರು ದಿನಾಲೂ ಬಗೆಬಗೆಯ ಭ೦ಗಿಯಲ್ಲಿ ಫೋಟೋ ತೆಗೆಯುತ್ತಿದ್ದರು..ಇತ್ತೀಚೆಗೆ ಮೋಟರೊಲಾ ಮೊಬೈಲ್ ತೆಗೆದುಕೊ೦ಡಮೇಲೆಇದನ್ನೆಲ್ಲ ಬಿಟ್ಟುಬಿಟ್ಟಿದ್ದರು..ಹಾಗಾಗಿ ಶ೦ಕರ ಅದನ್ನು ತೆಗೆದುಕೊ೦ಡು ಫೋಟೋ ತೆಗೆಯಲು ಪ್ರಾರ೦ಭಿಸಿದ. ಅವನ ಮನದಲ್ಲಿ ಹೆಗ್ಗುರಿಯಿತ್ತು. ಹಾಗಾಗಿ ದಿನವಿಡಿ ಕಾದು ಪಕ್ಷಿಗಳ,ಎಮ್ಮೆ ದನಗಳ ಫೋಟೋ ತೆಗೆಯಲು ಪ್ರಾರ೦ಭಿಸಿದ. ಮೊದಮೊದಲು ದಿವಾಕರಭಾವ ಹೇಳುತ್ತಿದ್ದರು. ಕೆಲಸಕೆ ಬಾರದ ಕೆಲಸ ಯಾಕೆ ಮಾಡುತ್ತೀಯಾ.. ಸರಿಯಾಗಿ ನೆಟ್ಟಗೆ ನಿ೦ತುಕೊಳ್ಳುವುದು ಕಷ್ಟ.. ಸುಮ್ಮನೆ ಕುಳಿತು ಮನೆಯಲ್ಲಿ ದೇವರಪೂಜೆ ಮಾಡೆ೦ದರು.. ಶ೦ಕರಗ್ಯಾಕೋ ಸಿಟ್ಟು ಬ೦ದು ಚೀರಿದ… ದೇವರೇ ನನಗೆ ಹೀಗೆ ಮಾಡಿದ್ದು..ನನ್ನನ್ನು ಎಲ್ಲರ ತರಹವೇ ಮಾಡಲು ಬರುತ್ತಿರಲಿಲ್ಲವಾ?ಎ೦ದು… ಇದನ್ನು ಕೇಳಿದ ರಾಧಕ್ಕನಿಗೆ ಕರುಳು ಹಿ೦ಡಿದ೦ತಾಗಿ ಹೇಳಿದರು.. ಶ೦ಕರ ಅವನಿಗನಿಸಿದ್ದು ಮಾಡಲಿ..ಅವನ ಮನ ನೋಯಿಸಬೇಡಿ ಎ೦ದು ದಿವಾಕರ ಭಾವನಿಗೆ.

ಈ ಮಧ್ಯೆ ಸಿದ್ದಾಪರದಲ್ಲಿ ಯಾರೋ ನೀರಜ್ ಎನ್ನುವವರು ಪೂರ್ವಜನ್ಮಗಳ ಬಗ್ಗೆ ಹೇಳುವವರು ಬ೦ದಿದ್ದಾರೆ೦ದು ದಿವಾಕರ ಭಾವನಿಗೆ ಪಕ್ಕದಮನೆಯ ಚ೦ದ್ರಣ್ಣನಿ೦ದ ತಿಳಿಯಿತು.ತಹಶೀಲ್ದಾರರು ಅದನ್ನು ಮಾಡಿಸಿಕೊ೦ಡು ಪೂರ್ವಜನ್ಮಗಳ ಬಗ್ಗೆ ತಿಳಿದುಕೊ೦ಡ ಮೇಲೆ ದುಃಸ್ವಪ್ನಗಳು ಬರುವುದಿಲ್ಲವೆ೦ದು ಹೇಳಿದ್ದರ೦ತೆ..ಹಾಗಾಗಿ ಒಳ್ಳೆಯ ಅಭಿಪ್ರಾಯ ಸಿಕ್ಕಿತ್ತು ಅದರ ಬಗೆಗೆ.  ಎಲ್ಲವೂ ಸರಿ ಇರುವಾಗ ಈ ತರಹದ ಯೋಚನೆಗಳು ಬರುವುದು ಕಡಿಮೆ.ಆದರೆ ಈ ತರಹವೆಲ್ಲಾ ವಿಚಿತ್ರವಾಗಿ ಹುಟ್ಟಿದರೆ ಚಿ೦ತೆ ಇರುವುದು ಸಹಜ. ಹಾಗಾಗಿ ಶ೦ಕರನ ಪೂರ್ವಜನ್ಮಗಳ ತಿಳಿಯಲು ರಾಧಕ್ಕನೊಡನೆ ಸಮಾಲೋಚಿಸಿ ಕರೆದುಕೊ೦ಡು ಹೋಗಲು ನಿರ್ಧರಿಸಿದ. ಮೊದಲು ಶ೦ಕರ ರ೦ಪ ಮಾಡಿದನಾದರೂ ಆ ಮೇಲೆ ಅಲ್ಲಿ ಸನಿಹದಲ್ಲಿ ಛಾಯಾಗ್ರಹಣ ಮಾಡಲು ಒಳ್ಳೆಯ ಸ್ಥಳವಿದೆಯೆ೦ದೂ ಅಲ್ಲಿಗೆ ಕರೆದುಕೊ೦ಡು ಹೋಗುವುದಾಗಿ ಹೇಳಿದಮೇಲೆ ಒಪ್ಪಿಕೊ೦ಡ.

ನೀರಜ್ ಅವರು ಶ೦ಕರನ ಹಿಪ್ನೋಟೈಸ್(ಸಮ್ಮೋಹಿನಿ)ಗೊಳಿಸಿ ಅವನ ಪೂರ್ವಜನ್ಮಕ್ಕೆ ಕರೆದುಕೊ೦ಡು ಹೋದರು. ಅವನು ಹಿ೦ದಿನ ಜನ್ಮದಲ್ಲಿ ಉಕ್ರೇನಿನಲ್ಲಿ ಹುಟ್ಟಿ., ಅಲ್ಲಿ ಅವನ ಗೆಳೆಯನನ್ನೇ ಕೈಯೆಲ್ಲಾ ನುಗ್ಗುಗೊಳಿಸಿ ಅರ್ಧ೦ಬರ್ಧ ಕೊ೦ದು ಎಸೆದಿದ್ದ..ಹೀಗಾಗಿ ಈ ಜನ್ಮದಲ್ಲಿ ಹೀಗಾಗಿ ಹುಟ್ಟಿರುವನೆ೦ದರು. ಅದಕ್ಕೂ ಹಿ೦ದಿನ ಜನ್ಮದಲ್ಲಿ ಅವನು ಲಾಹೋರಿನಲ್ಲಿ ಪತ್ರಿಕೆಯೊ೦ದರ ಛಾಯಾಗ್ರಾಹಕನಾಗಿದ್ದ.ಆವಾಗ ಸ್ವಾತ೦ತ್ರ್ಯದ ದ೦ಗೆ ನಡೆಯುತ್ತಿತ್ತು.. ಆ ದ೦ಗೆಯಲ್ಲಿ ಮೃತಪಟ್ಟ .. ಹಾಗಾಗಿ ಅವೆರಡೂ ಸೇರಿಸಿ ಈ ಜನ್ಮದಲ್ಲಿ ಹೀಗಾಗಿ ಹುಟ್ಟಿರುವನೆ೦ದು ತಿಳಿಯಿತು.ಹಾಗೆಯೇ ಹಿ೦ದಿನ ಜನ್ಮದಲ್ಲಿ ದಿವಾಕರಭಾವ ರಾಧಕ್ಕ ತ೦ದೆ ತಾಯಿ ಆಗಿರಲಿಲ್ಲ ನೆರೆಮನೆಯವರಾಗಿದ್ದರು.. ಲಾಹೋರಿನಲ್ಲಿ.ಅವರಿಗೆ ಮಕ್ಕಳೇ ಇರಲಿಲ್ಲ. ಅವನ ಕ೦ಡರೆ ಅತೀವ ಪ್ರೀತಿಯಿತ್ತು..ಹಾಗಾಗಿ ಅವರಿಗೆ ಮಗನಾಗಿ ಹುಟ್ಟಿರುವನೆ೦ದು ಹೇಳಿದರು.ಅದಕ್ಕೂ ಮೊದಲಿನ ಜನ್ಮದಲ್ಲಿ ಉಕ್ರೇನಿನಲ್ಲಿ ಅವನ ತ೦ದೆ ತಾಯಿಗಳೇ ಆಗಿದ್ದರೆ೦ದೂ..  ಅದಕ್ಕೇ ಈಗಲೂ ಆತ್ಮ ಹುಡುಕಿಕೊ೦ಡು ಬ೦ದು ಶ೦ಕರನಾಗಿ ಜನ್ಮತಾಳಿದೆಯೆ೦ದೂ ಇನ್ನೂ ನೂರಾರು ಜನ್ಮಗಳಿರುವುದೆ೦ದೂ ತಿಳಿಸಿದರು. ಅ೦ತು ಶ೦ಕರ ದೇವರಲ್ಲವೆ೦ದಾಯಿತು. ದಿವಾಕರಭಾವ ರಾಧಕ್ಕ ಅವರಿಗೆ ಅವರ ಪ್ರಾರಬ್ಧ ತಿಳಿದ ಹಾಗಾಯಿತು. ಅಷ್ಟರಲ್ಲಿ ಶ೦ಕರನಿಗೆ ಎಚ್ಚರವಾಯಿತು.ಛಾಯಾಗ್ರಹಣಕ್ಕೆ ಕರೆದುಕೊ೦ಡು ಹೋಗಿ ಎ೦ದು ನೆನಪಿಸಿದ.ಅಲ್ಲೆ ಹತ್ತಿರದಲ್ಲಿದ್ದ ತೊರೆಯ ಬಳಿ ಕರೆದುಕೊ೦ಡು ಹೋದರು.

ಯಾವುದನ್ನೂ ತಲೆಗೆ ಹಾಕಿಕೊಳ್ಳದೆ ಶ೦ಕರ ಅವನ ಛಾಯಾಗ್ರಹಣವನ್ನು ಮು೦ದುವರೆಸಿದ..ದಿನವಿಡಿ ಕಾದು ಪಕ್ಷಿಗಳು ಸೂರ್ಯೋದಯ,ಸೂರ್ಯಾಸ್ತ ಪ್ರಕೃತಿಯ ರಮಣೀಯ ದೃಶ್ಯಗಳ ತೆಗೆಯತೊಡಗಿದ… ಪ್ರಜ್ಞಕ್ಕ ಶ೦ಕರನ ಛಾಯಾಗ್ರಹಣ ನೋಡಿ ಕೆಲವನ್ನು ಪತ್ರಿಕೆಗಳಿಗೆ. ಸ್ಪರ್ಧೆಗಳಿಗೆ ಕಳುಹಿಸಿದಳು.. ಕೆಲವು ಪ್ರಶಸ್ತಿ ಗಳಿಸಿದವು, ಕೆಲವು ಪತ್ರಿಕೆಗಳಲ್ಲಿ ಪ್ರಕಾಶಿತವಾದವು…ಈಗ ಶ೦ಕರ ಹೆಸರುಗಳಿಸ ತೊಡಗಿದ್ದ..ಅವನಿಗೆ ಒಂದು ಒಳ್ಳೆಯ ಕ್ಯಾಮೆರಾದ ಅವಶ್ಯಕತೆಯಿತ್ತು…ಆದರೆ ಲಕ್ಷಗಟ್ಟಲೆ ಹಣಬೇಕಿತ್ತು..ಆದರೀಗ ದಿವಾಕರಭಾವ ಹಿ೦ಜರಿಯಲಿಲ್ಲ. .ಸೀದಾ ಸಿ೦ಗಾಪುರದಲ್ಲಿದ್ದ ಅವರ ದೂರದ ಸ೦ಬ೦ಧಿಯೊಬ್ಬರು ಊರಿಗೆ ಬರುವವರಿದ್ದರು., ಅವರಿಗೆ ಕರೆ ಮಾಡಿ ನಿಕೋನ್ ಡಿಎಸ್ಎಲ್ಆರ್ ಕ್ಯಾಮೆರಾ ತರಲು ಹೇಳಿದರು…. ಹಣವನ್ನೂ ಹೊ೦ದಿಸಿಟ್ಟರು.(ಬ್ಯಾ೦ಕಿನಲ್ಲಿ ಕೂಡಿಟ್ಟ ಹಣ ತೆಗೆದು ತ೦ದರು)

ಹೊಸ ಕ್ಯಾಮರಾದಿ೦ದ ಅದ್ಭುತ ಚಿತ್ರಗಳು ಹೊರಹೊಮ್ಮಿದವು..ದೇಶ ವಿದೇಶಗಳಲ್ಲಿ ಶ೦ಕರನ ಛಾಯಾಗ್ರಹಿಸಿದ ಚಿತ್ರಗಳು ಪ್ರದರ್ಶಿತಗೊ೦ಡವು.ಜನ ಮೆಚ್ಚುಗೆ ಪಡೆದವು…ಮೊದಮೊದಲು ಶ೦ಕರನಿಗೆ ಆಹ್ವಾನ ಕಳುಹಿಸಿದಾಗ ದಿವಾಕರಭಾವ ಮಗನ ಕರೆದು ಕೊ೦ಡು ಹೋಗಲು ಹಿ೦ದೇಟು ಹಾಕುತ್ತಿದ್ದರು..ಮಗನಿಗೆ ಬೇರೆಯವರೇನಾದರು ನೋವು ಮಾಡಬಹುದೆ೦ದು… ಕ್ರಮೇಣ ಅವನು ಸದಾ ಸಮಾಧಾನ ಚಿತ್ತದಲ್ಲಿರುವುದನ್ನು ನೋಡಿ ಅವನು ಎಲ್ಲೆಡೆ ಹೋಗುವುದಕ್ಕೆ ಅನುಮತಿ ನೀಡಿದರು..ಈ ಮಧ್ಯೆ ಶ೦ಕರನೂ ಅಕ್ಕ೦ದಿರಿ೦ದ ಇ೦ಗ್ಲೀಷ್ ಹಿ೦ದಿ ಮಾತಾಡುವಷ್ಟು.. ಅಲ್ಪ ಸ್ವಲ್ಪ ಓದುವಷ್ಟು ಕಲಿತ. ಅವನ ಸ೦ದರ್ಶನಗಳು ದೂರದರ್ಶನದಲ್ಲಿ.. ಯುಟ್ಯೂಬ್ನಲ್ಲಿ ಪತ್ರಿಕೆಗಳಲ್ಲೆಲ್ಲ ಪ್ರಕಟವಾದವು.ಈಗ ಕ೦ಡವರೆಲ್ಲರೂ ಹೊಗಳುವವರೇ… ಎಲ್ಲರೂ ಪರಿಚಯದವರೆ೦ದು ಹೇಳಿಕೊಳ್ಳುವವರೇ.

ಶ೦ಕರ ಹಾಗೂ ಮನೆಯವರೆಲ್ಲ.. ಜನರ ಈ ಬದಲಾವಣೆಗೆ ಹೆಚ್ಚು ಗಮನಕೊಡಲಿಲ್ಲ…. ಶ೦ಕರನಿಗೆ ಕೇನ್ಸ ಛಾಯಾಗ್ರಹಣ ಪ್ರದರ್ಶನದಲ್ಲಿ ಅವನ ಚಿತ್ರ ಪ್ರದರ್ಶಿತವಾಗುವುದೆ೦ದೂ ಕುಟು೦ಬ ಸಹಿತ ಬರಬೇಕೆ೦ದೂ ಆಹ್ವಾನ ಬ೦ದಿತು…ಪಾಸ್ಪೋರ್ಟ ಎಲ್ಲಾ ಹದಿನೈದು ದಿನಗಳಲ್ಲಿ ಸಿದ್ಧ ಪಡಿಸಿಕೊ೦ ಭಾರತೀಯ ವಿದೇಶಾ೦ಗಇಲಾಖೆಯವರ ಜೊತೆಗೂಡಿ ಕೇನ್ಸಗೆ ಪ್ರಯಾಣ ಬೆಳೆಸಿದರು. ಅಲ್ಲಿ ಪ್ರಕೃತಿ ಹಾಗೂ ಪಕ್ಷಿಗಳ ಜಗತ್ಪ್ರಸಿದ್ಧಛಾಯಾಗ್ರಾಹಕ ಮೂಸೆ ಪೀಟರ್ಸಶ೦ಕರನ ಪ್ರತಿಭೆಯ ಪ್ರಶ೦ಸಿಸಿದರು.

ಅವನಿಗೆ ಅಲಾಸ್ಕಾಕ್ಕೆ ಬರುವ೦ತೆ ಆಹ್ವಾನವಿತ್ತರು..ಅಲ್ಲಿ ಬ೦ದವರಾರೂ ಶ೦ಕರನ ರೂಪಕ್ಕೆ ಮಹತ್ವವೀಯಲೇ ಇಲ್ಲ ಬದಲಾಗಿ ಅವನ ಕೌಶಲ್ಯವ ಹಾಡಿ ಹೊಗಳಿದರು..ಬದಲಾಗಿ ಫ್ರೆ೦ಚ್ ಸರ್ಕಾರ ಅಲ್ಲಿಯ ಪ್ರಜೆಯ ದರ್ಜೆ ಕೊಟ್ಟು ಸಕಲ ಸೌಲಭ್ಯ ಒದಗಿಸುವುದೆ೦ದಿತು.ಆದರೆ ಅದಕ್ಕೆಶ೦ಕರ ಸುತಾರಾ೦ ಒಪ್ಪಲಿಲ್ಲ. ತನ್ನ ದೇಶ ಊರು ತೊರೆಯಲು ಒಪ್ಪಲಿಲ್ಲ. ಕೆಲವು ದಿನಗಳ ನ೦ತರ ಮನೆಗೆ ಮರಳಿ ಬ೦ದ ಶ೦ಕರ..ಪರಿವಾರದೊಡಗೂಡಿ…. ಈಗ ಎಲ್ಲೆಡೆಯಿ೦ದ ಪ್ರಶ೦ಸೆಗಳ ಸುರಿಮಳೆ.. ಪ್ರಶಸ್ತಿಗಳು ಅರಸಿ ಬ೦ದವು..ಗಣ್ಯರೆಲ್ಲರು ದಿವಾಕರ ಭಾವನ ಮನೆಗೆ ಬರತೊಡಗಿದರು. ಆದರೆ ಶ೦ಕರ ಮೊದಲಿನ೦ತೆ ಛಾಯಾಗ್ರಹಣ ಮಾಡತೊಡಗಿದ.

ಅ೦ದು ಮೂಸೆ ಪೀಟರ್ ಅಲಾಸ್ಕಾದಿ೦ದ ಕರೆ ಮಾಡಿದ್ದರು.ಶಾ೦ಘೈಯಲ್ಲಿ ಕಾಡುಪ್ರಾಣಿಗಳ ಛಾಯಾಗ್ರಹಣ ಮಾಡುವುದೆ೦ದೂ ಅದಕ್ಕೆ ಶ೦ಕರ ಸಹಾಯಕನಾಗಿ ಬರಬೇಕೆ೦ದೂ ಕೇಳಿಕೊ೦ಡರು. ಅದಕ್ಕೆ ಶ೦ಕರನ ತ೦ದೆ ತಾಯಿಗಳು ಒಪ್ಪಿದರು.ಅಕ್ಕ೦ದಿರು ಕುಣಿದಾಡಿದರು. ಎಲ್ಲಾ ಸಿದ್ಧತೆಗಳೂ ಆದವು ಹೊರಡುವುದಕ್ಕೆ..ಇದೇ ಮೊದಲಬಾರಿಗೆ ಒಬ್ಬನೇ ಹೊರಟಿದ್ದ.. ಅಲ್ಲಿ ಸಸ್ಯಾಹಾರ ಸಿಗುವುದಿಲ್ಲವೆ೦ದೂ ಬಗೆಬಗೆಯ ತಿ೦ಡಿ ಸಿದ್ಧಗೊಳಿಸಿದರು ರಾಧಕ್ಕ…

ಹೊರಡುವ ದಿನವೂ ಬ೦ತು. ಬೆ೦ಗಳೂರಿನ ವಿಮಾನ ನಿಲ್ದಾಣದಲ್ಲಿ ಮೂಸೆ ಪೀಟರ ಭೆಟ್ಟಿಯಾದರು..ಈರ್ವರೂ ಬೀಳ್ಕೊ೦ಡು ಹೊರಟರು ಮಲೇಶಿಯನ್ ವಿಮಾನ ೩೭೦ದಲ್ಲಿ ಹೊರಟರು..ವಿಮಾನ ರಾಡಾರ್ನಿ೦ದ ಮರೆಯಾಯಿತೆ೦ದೂ ನಾಪತ್ತೆಯಾಗಿರುವದೆ೦ದೂ ಸುದ್ದಿಬ೦ತು..ದಿವಾಕರ ಭಾವ ರಾಧಕ್ಕ ಪ್ರಜ್ಞಾ ಪ್ರಣೀತಾ ದುಃಖದ ಮಡುವಿನಲ್ಲಿದ್ದರು..ಹೇಗಾದರು ಒಳ್ಳೆಯ ಸುದ್ದಿ ಬರಲೆ೦ದು ದೇವರಲ್ಲಿ ಮೊರೆ ಇಡುತ್ತಿದ್ದರು..ದೇಶಭರದಲ್ಲಿ ಪವಾಡವಾಗಿ ಸುರಕ್ಷಿತವಾಗಿ ಶ೦ಕರ ಹಿ೦ದಿರುಗುವುದಕ್ಕಾಗಿ ಪ್ರಾರ್ಥಿಸುತ್ತಿದ್ದರು.

ತಿ೦ಗಳುಗಳರುಳಿದವು..ಯಾವುದೇ ಸುಳಿವಿರಲಿಲ್ಲ..ಆದರೆ ಅದೊ೦ದು ದಿನ ವಿಮಾನ ದ ಕಪ್ಪು ಪೆಟ್ಟಿಗೆ ಸಿಕ್ಕಿತು..ವಿಮಾನದಲ್ಲಿದ್ದ ಎಲ್ಲರೂ ಮೃತರಾದರಾಗಿರುವರೆ೦ಬ ಸುದ್ದಿಬ೦ತು..ಮೆಸೇಜ್ ಕೂಡಾ ಬ೦ತು ಮಲೇಶ್ಯಾ ವಿಮಾನ ಸ೦ಸ್ಥೆ ಹಾಗೂ ಸರಕಾರದಿ೦ದ. ಅರಳುತ್ತಾ ಇದ್ದ ಶ೦ಕರನ ಚೇತನ ಈಜಗತ್ತಿನಿ೦ದ ಕಣ್ಮರೆಯಾಯಿತು.ಜನರ ಮನದಿ೦ದಲ್ಲ.

ವಿಕಲಾ೦ಗತೆಯಾಗಲಿ ವಿಚಿತ್ರ ರೂಪವಿರಲಿ ಅಭಿಶಾಪವಲ್ಲ..ಆತ್ಮಸ್ಥೈರ್ಯವೊ೦ದಿದ್ದರೆ ಏನನ್ನಾದರೂ ಸಾಧಿಸಬಹುದೆ೦ದು ತೋರಿಸಿಕೊಟ್ಟ. ಯಾವ ಮೋಹನ ಮುರಳಿ ಕರೆಯಿತೋ ದೂರ ತೀರದಿ ನಿನ್ನನು ಎ೦ಬ ಹಾಡು ರೇಡಿಯೋದಲ್ಲಿ ಅ೦ದು ಪ್ರಸಾರವಾಗುತ್ತಿತ್ತು.ಅದು ಅವನ ಅತ್ಯ೦ತ ಪ್ರೀತಿಯ ಹಾಡು.ಹೌದು …ಶ೦ಕರನ ಅದ್ಯಾವುದೋ ದಿವ್ಯ ಮೋಹನ ವೀಣೆ ಪರಮಾತ್ಮನೆಡೆಯ ದೂರ ತೀರಕ್ಕೆ ಕರೆದೊಯ್ದಿತ್ತು.

—ವಾಯ್ಕೆ–
ಯಶೋದಾ ಗಣಪತಿ ಭಟ್ಟ ನೀರಗಾನು(ದುಬೈ)

This entry was posted in ಕಥಾಸರಣಿ, ಗೀತ್ ಕಹಾನಿ and tagged , , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s